ದಾವಣಗೆರೆ: ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ವೀರಭದ್ರಪ್ಪ ಅವರು ಪಾಳು ಬಿದ್ದ ಉದ್ಯಾನವನಗಳಿಗೆ ಪುನರ್ಜೀವ ಕೊಟ್ಟು ಪರಿಸರ ಪ್ರೇಮ ಮೆರೆದಿದ್ದಾರೆ.
80 ವರ್ಷ ವಯಸ್ಸಾದರೂ ಯುವಕನಂತೆ ಕೆಲಸ ಮಾಡುವ ವೀರಭದ್ರಪ್ಪ ಅವರು ದಾವಣಗೆರೆಯ ವಿವೇಕಾನಂದ ಬಡಾವಣೆ ನಿವಾಸಿ. ಮೂಲತಃ ಚನ್ನಗಿರಿ ತಾಲೂಕಿನ ಹಿರೇಕೋಗಲೂರು ಗ್ರಾಮದವರು. ಚಿಕ್ಕಂದಿನಿಂದಲೂ ಪರಿಸರ ಪ್ರೇಮ ಹೊಂದಿದ್ದರು. ಇದೀಗ ವಿವೇಕಾನಂದ ಬಡಾವಣೆಯಲ್ಲಿ ಪಾಳು ಬಿದ್ದಿದ್ದ ಪಾರ್ಕ್ಗಳಿಗೆ ಕಾಯಕಲ್ಪ ನೀಡಿದ್ದಾರೆ.
ವೀರಭದ್ರಪ್ಪನವರು ವಿವೇಕಾನಂದ ಬಡಾವಣೆಗೆ ಬಂದು ವಾಸ ಮಾಡಿದಾಗ ಅಲ್ಲಿ ಪಾಲಿಕೆಗೆ ಸೇರಿದ ಎರಡು ಪಾರ್ಕ್ಳಿದ್ದವು. ಗಿಡಗಂಟೆಗಳು ಬೆಳೆದು ನಿಂತಿದ್ದವು. ವೀರಭದ್ರಪ್ಪ ಅವರು ಪಾಳು ಬಿದ್ದಿದ್ದ ಪಾರ್ಕ್ನಲ್ಲಿ ಮುಳ್ಳು ಗಿಡಗಳನ್ನು ಕಡಿದು, ಸ್ವಚ್ಛ ಮಾಡಿ ಸುಂದರವಾದ ಪಾರ್ಕ್ ನಿರ್ಮಾಣ ಮಾಡಿದ್ದಾರೆ.
ಅವರ ಸ್ವಂತ ಖರ್ಚಿನಲ್ಲಿ ನವಗ್ರಹ ವೃಕ್ಷಗಳು, ಪಂಚವಟಿ ವೃಕ್ಷ, ಬನ್ನಿ ಸೇರಿದಂತೆ ಪೂಜೆಗೆ ಯೋಗ್ಯವಾದ ಮರಗಳನ್ನು ಬೆಳೆಸಿ ಪೋಷಿಸುತ್ತಿದ್ದಾರೆ. ಪಾರ್ಕ್ ಅನ್ನು ದೇವಾಲಯದ ರೀತಿ ನಿರ್ಮಾಣ ಮಾಡಿದ್ದಾರೆ. ಸ್ವಂತ ಖರ್ಚಿನಲ್ಲಿ ಪಾರ್ಕ್ ಅಭಿವೃದ್ಧಿ ಮಾಡಿದ್ದು, ಇದರಿಂದಲೇ ನನಗೆ ನೆಮ್ಮದಿ ಎಂದು ವೀರಭದ್ರಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.