ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದ ಹೊಳೆಯಲ್ಲಿ ರೈತ ಕೊಚ್ಚಿ ಹೋದ ಘಟನಾ ಸ್ಥಳಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿ ಪರಿಶೀಲಿಸಿದರು.
ಐದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ರಮೇಶ್ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಮೃತ ರೈತ ರಮೇಶ್ ಪತ್ನಿ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಇದನ್ನೂ ಓದಿ...ಹೊನ್ನಾಳಿಯಲ್ಲಿ ದೀಪಾವಳಿ ಹಬ್ಬದ ದಿನವೇ ದುರಂತ... ನೀರುಪಾಲಾದ ರೈತ, ಎತ್ತುಗಳು!
ಬೆಳಗ್ಗೆ ಕೃಷಿ ಚಟುವಟಿಕೆ ಬಳಿಕ ಎತ್ತಿನ ಗಾಡಿ ತೊಳೆಯಲು ಹೊಳೆಗೆ ಹೋಗಿದ್ದರು. ಆಗ ಎತ್ತಿನ ಗಾಡಿ ಪಲ್ಟಿಯಾಗಿ ಎತ್ತುಗಳ ಜೊತೆ ರೈತನೂ ಹೊಳೆಯಲ್ಲಿ ಕೊಚ್ಚಿ ಹೋಗಿದ್ದ. ಎತ್ತುಗಳ ಕಳೇಬರ ಸಿಕ್ಕರೂ, ರೈತನ ಮೃತದೇಹ ಪತ್ತೆಯಾಗಿಲ್ಲ.
ಸ್ಥಳಕ್ಕೆ ಭೇಟಿ ನೀಡಿದ ಎಂ.ಪಿ.ರೇಣುಕಾಚಾರ್ಯ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ರೇಣುಕಾಚಾರ್ಯ, ಎತ್ತುಗಳ ಸಾವಿನ ಹಿನ್ನೆಲೆಯಲ್ಲಿ ₹ 60 ಸಾವಿರ, ಪಶು ಇಲಾಖೆಯಿಂದ ₹ 20 ಸಾವಿರ ಮತ್ತು ವೈಯಕ್ತಿಕವಾಗಿ ₹ 50 ಸಾವಿರ ನೀಡಿದರು. ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಜೆ.ಕೆ.ಸುರೇಶ್ ₹10 ಸಾವಿರ ಕೊಟ್ಟರು.
ಬಳಿಕ ರೇಣುಕಾಚಾರ್ಯ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಜಿಲ್ಲಾಧಿಕಾರಿ ಜೊತೆ ದೂರವಾಣಿ ಮೂಲಕ ಮಾತನಾಡಿದರು. ಮೃತದೇಹ ಸಿಕ್ಕ ತಕ್ಷಣವೇ ₹ 5 ಲಕ್ಷ ಪರಿಹಾರವನ್ನು ಮೃತ ರೈತನ ಕುಟುಂಬಕ್ಕೆ ನೀಡುವ ಬಗ್ಗೆ ಭರವಸೆ ನೀಡಿದರು.