ದಾವಣಗೆರೆ: ಬೆಂಗಳೂರು ಗಲಭೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಜೈಲಿನಲ್ಲಿಡುವ ಬದಲು ಗಲ್ಲಿಗೆ ಹಾಕಬೇಕೆಂದು ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ಎಂ. ಪಿ. ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹೊನ್ನಾಳಿಯಲ್ಲಿ ಮಾತನಾಡಿದ ಅವರು, ದಲಿತ ಶಾಸಕರ ಮನೆ ಮೇಲೆ ದಾಳಿ ನಡೆಸಿದವರು ದೇಶದ್ರೋಹಿಗಳು. ವ್ಯವಸ್ಥಿತ ಪಿತೂರಿ ನಡೆಸಿ ಹಣ, ಬಂಗಾರ ದೋಚಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಜಮೀರ್ ಅಹಮ್ಮದ್, ಕಾಂಗ್ರೆಸ್ ಕೆಲ ನಾಯಕರು ಅಮಾಯಕರು ಎನ್ನುತ್ತಾರೆ. ಜಮೀರ್ ಅಹಮ್ಮದ್ ಹಾಗೂ ಮತ್ತಿತರ ದೇಶದ್ರೋಹಿಗಳ ಕುಮ್ಮಕ್ಕಿನಿಂದ ಈ ಗಲಭೆ ನಡೆದಿದೆ ಎಂದು ಆರೋಪಿಸಿದರು.
ಬೆಂಗಳೂರು ಗಲಭೆಕೋರರನ್ನು ಬಂಧಿಸುವ ಬದಲು ಗಲ್ಲಿಗೇರಿಸಿ ಎಂದ ರೇಣುಕಾಚಾರ್ಯ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಗಲಭೆ ಸಂಬಂಧ 350 ಜನರನ್ನು ಬಂಧಿಸಲಾಗಿದೆ. ಎಸ್ಡಿಪಿಐ ಸೇರಿದಂತೆ ವಿವಿಧ ಸಂಘಟನೆಗಳನ್ನು ರಾಜ್ಯ ಸರ್ಕಾರ ನಿಷೇಧಿಸುತ್ತದೆ. ದೇಶದ್ರೋಹಕ್ಕೆ ಕುಮ್ಮಕ್ಕು ನೀಡುವವರು, ಪ್ರಚೋದನೆ ನೀಡುವವರನ್ನು ಈ ಹಿಂದೆ ಗುಂಡಿಕ್ಕಿ ಕೊಲ್ಲಿ ಎಂದು ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ, ಗುಂಡಿಕ್ಕಿ ಕೊಲ್ಲುವ ಬದಲು ಅವರನ್ನು ಗಲ್ಲಿಗೇರಿಸಬೇಕು ಎಂದು ರೇಣುಕಾಚಾರ್ಯ ಒತ್ತಾಯಿಸಿದರು.
ಪೊಲೀಸರ ಆತ್ಮಸ್ಥೈರ್ಯ ಕುಂದಿಸುವ ಹೇಳಿಕೆ ನೀಡಬಾರದು. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಜಮೀರ್ ಅಹಮ್ಮದ್ ಈ ವರ್ತನೆ ಬಿಡಬೇಕು. ಆಸ್ತಿ ನಷ್ಟ ಮಾಡಿದವರ ಆಸ್ತಿ ಜಫ್ತಿ ಮಾಡಿ ಅವರಿಂದಲೇ ನಷ್ಟ ಭರಿಸಲಾಗುತ್ತದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.