ದಾವಣಗೆರೆ: ಕೊರೊನಾ ಹಿನ್ನೆಲೆ ರೇಣುಕಾಚಾರ್ಯ ಭಾರಿ ಸುದ್ದಿಯಲ್ಲಿದ್ದಾರೆ. ಅವರು ತಮ್ಮ ಕೈಲಾದ ಎಲ್ಲಾ ರೀತಿಯ ಸಹಾಯವನ್ನು ಬಡವರಿಗೆ ಹಾಗೂ ಕೊರೊನಾ ಸೋಂಕಿತರಿಗೆ ಮಾಡಿಕೊಂಡು ಬರುತ್ತಿದ್ದಾರೆ. ಈ ಬೆನ್ನಲ್ಲೇ ಈಗ ಮತ್ತೊಂದು ಮಹತ್ವದ ಕಾರ್ಯ ಮಾಡಿದ್ದಾರೆ.
ಕೋವಿಡ್ನಿಂದ ಮೃತಪಟ್ಟ ಯುವಕನ ಮೃತ ದೇಹವನ್ನು ಗ್ರಾಮಕ್ಕೆ ತರಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಶಾಸಕ ರೇಣುಕಾಚಾರ್ಯ ಅವರೇ ಗ್ರಾಮಸ್ಥರ ಒಪ್ಪಿಗೆಯ ಮೇರೆಗೆ ಮೃತ ದೇಹವಿರುವ ಆಂಬ್ಯುಲೆನ್ಸ್ ಅನ್ನು ಸ್ವತಃ ತಾವೇ ಚಾಲನೆ ಮಾಡುತ್ತ ಗ್ರಾಮಕ್ಕೆ ಹೋಗಿ ಅಂತ್ಯಸಂಸ್ಕಾರ ಮಾಡಿಸಿದ್ದಾರೆ.
ಆಂಬ್ಯುಲನ್ಸ್ ಚಲಾಯಿಸಿದ ಶಾಸಕ ರೇಣುಕಾಚಾರ್ಯ ಏನಿದು ಘಟನೆ?
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ಘಟನೆ ನಡೆದಿದೆ. ಇನ್ನು ರೇಣುಕಾಚಾರ್ಯ ಅವರು ಸೋಂಕಿತ ಯುವಕನನ್ನು ಬೆಳಗ್ಗೆಯಷ್ಟೇ ಆರೋಗ್ಯ ವಿಚಾರಿಸಿ ಬಂದಿದ್ದರಂತೆ. ಧೈರ್ಯ ಹೇಳಿ ಬಂದ ಒಂದೇ ಘಂಟೆಯಲ್ಲೇ ಕೊರೊನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ 31 ವರ್ಷದ ಯುವಕ ಸಾವಿಗೀಡಾಗಿದ್ದಾನೆ.
ಕೊರೊನಾದಿಂದ ಸಾವಿಗೀಡಾದ ಕಾರಣ ಮೃತ ದೇಹವನ್ನು ಗ್ರಾಮಕ್ಕೆ ತರದಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ವಿಚಾರ ತಿಳಿದ ಶಾಸಕ ರೇಣುಕಾಚಾರ್ಯ, ಗ್ರಾಮಸ್ಥರನ್ನು ಒಪ್ಪಿಸಿ, ಮೃತ ದೇಹವನ್ನು ಆಂಬ್ಯುಲೆನ್ಸ್ ನಲ್ಲಿ ತೆಗೆದುಕೊಂಡು ಸ್ವತಃ ಚಾಲನೆ ಮಾಡಿಕೊಂಡು ಹೋಗಿ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಿಸಿದ್ದಾರೆ.
ರೇಣುಕಾಚಾರ್ಯರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.