ದಾವಣಗೆರೆ:ಚಿಕ್ಕ ವಯಸ್ಸಿನಲ್ಲೇ ತನ್ನ ತಂದೆ-ತಾಯಿ ಕಳೆದುಕೊಂಡು ನೊಂದ ಹೆಣ್ಣು ಮಗಳು. ಅಪ್ಪ-ಅಮ್ಮ ಇಲ್ಲದ ತಬ್ಬಲಿ ಎಂದು ಸಂಬಂಧಿಕರೇ ಮುಂದೆ ನಿಂತು ಲಕ್ಷಗಟ್ಟಲೇ ವರದಕ್ಷಿಣೆ ನೀಡಿ ಮದುವೆ ಮಾಡಿದ್ದರು. ಮದುವೆಯಾದ ಅ ಯುವತಿ ಚಿಕ್ಕ ವಯಸ್ಸಿನಲ್ಲೇ ಬೆಟ್ಟದಷ್ಟು ಕನಸು ಕಂಡಿದ್ದರು. ಆ ಜೋಡಿ ನೋಡಿದ್ರೆ ಎಂಥವರಿಗೂ ಕೂಡ ಕಣ್ಣು ಕುಕ್ಕದೆ ಇರಲಾರದು. ಆದ್ರೇ ಗರ್ಭಿಣಿಯಾಗಿದ್ದ ಆ ಯುವತಿ ಮಗುವಿಗೆ ಜನ್ಮ ನೀಡುವ ಮೊದಲೇ ವರದಕ್ಷಿಣೆ ಎಂಬ ಭೂತಕ್ಕೆ ಬಲಿಯಾಗಿದ್ದಾರೆ. ನವವಿವಾಹಿತೆಯೊಬ್ಬಳು ಮದುವೆಯಾಗಿ ಮೂರೇ ತಿಂಗಳಿಗೆ ತಮ್ಮ ಜೀವನದ ಪಯಣವನ್ನು ನಿಲ್ಲಿಸಿರುವ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಹಳ್ಳಿಕೆರೆಕೋಡಿ ತಾಂಡದ ರೂಪಬಾಯಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಇದಕ್ಕೆ ವರದಕ್ಷಿಣೆ ಕಿರುಕುಳ ಎಂದು ಮೃತ ರೂಪಬಾಯಿ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಕಳೆದ ಮಾರ್ಚ್ನಲ್ಲಿ ಚನ್ನಗಿರಿ ತಾಲೂಕಿನ ಮೀಯಾಪುರ ಗ್ರಾಮದ ಖಾಸಗಿ ಶಾಲೆಯ ಶಿಕ್ಷಕನಾಗಿರುವ ಗಂಗಾಧರ್ ಎನ್ನುವರ ಜೊತೆ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಮದುವೆಗೆ ಲಕ್ಷಗಟ್ಟಲೇ ಹಣ, ಚಿನ್ನಾಭರಣ ಬೈಕ್ ಕೊಟ್ಟು ಧಾಮ್ ಧೂಮ್ ಎಂದು ಮದುವೆ ಮಾಡಿಕೊಟ್ಟಿದ್ದರು ರೂಪಾ ಸಂಬಂಧಿಕರು.
ಚಿಕ್ಕಂದಿನಲ್ಲೇ ಅನಾಥೆ.. ಚಿಕ್ಕ ವಯಸ್ಸಿನಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡ ರೂಪಬಾಯಿ ಗಂಡನ ಮನೆಯಲ್ಲಿ ಸಂತೋಷವಾಗಿ ಇರಲಿ ಎಂದು ಅವರ ಚಿಕ್ಕಪ್ಪ- ಚಿಕ್ಕಮ್ಮ ಸಾಕಷ್ಟು ಹಣ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದರು. ಆದರೆ ಮದುವೆಯಾಗಿ ಒಂದು ತಿಂಗಳ ನಂತರ ಗಂಡನ ಮನೆಯವರಿಂದ ವರದಕ್ಷಿಣೆ ಕಿರುಕುಳ ಶುರುವಾಗಿತ್ತು. ಮದುವೆಯಲ್ಲಿ ಮೂರು ಗ್ರಾಂ ಬಂಗಾರ ಕಡಿಮೆ ನೀಡಿದ್ದಾರೆ ಎಂದು ಹೇಳಿ ಚಿತ್ರಹಿಂಸೆ ನೀಡುತ್ತಿದ್ದರಂತೆ. ಅಲ್ಲದೆ ತವರು ಮನೆಯವರ ಬಳಿ ಕೂಡ ಮಾತನಾಡಲು ಬಿಡುತ್ತಿರಲಿಲ್ಲ. ವರದಕ್ಷಿಣೆಗಾಗಿ ಹೊಡೆದು ವಿಷ ಕುಡಿಸಿ ಕೊಲೆ ಮಾಡಿದ್ದಾರೆ ಎಂದು ರೂಪಬಾಯಿ ಪೋಷಕರು ಆರೋಪ ಮಾಡಿದ್ದಾರೆ.