ದಾವಣಗೆರೆ: ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹಿಜಾಬ್ ಬಗ್ಗೆ ಮಾತನಾಡುವಾಗ ಸ್ವಾಮೀಜಿಗಳು ಧರಿಸುವ ಪೇಟದ ಬಗ್ಗೆ ಸಣ್ಣ ಮಾತುಗಳನ್ನಾಡಿದ್ದು, ಅವರ ಸ್ಥಾನಕ್ಕೆ ಗೌರವ ತರುವಂತಹದ್ದಲ್ಲ. ಅವರು ತಕ್ಷಣ ಕ್ಷಮೆಯಾಚಿಸಬೇಕು ಎಂದು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಆಗ್ರಹಿಸಿದ್ದಾರೆ.
ದಾವಣಗೆರೆ ನಗರದ ರೇಣುಕ ಮಂದಿರದಲ್ಲಿ ಮಾತನಾಡಿದ ಅವರು, ನ್ಯಾಯಾಲಯ ಈಗಾಗಲೇ ಹಿಜಾಬ್ ವಿಚಾರದಲ್ಲಿ ಸಮವಸ್ತ್ರ ಕಡ್ಡಾಯ ಎಂದು ಆದೇಶ ನೀಡಿದೆ. ಆದ್ರೆ ಈ ಬಗ್ಗೆ ಸಿದ್ದರಾಮಯ್ಯ ಅವರು ಮತ್ತೆ ಮಾತನಾಡುವುದು ಶುದ್ಧ ತಪ್ಪು. ನ್ಯಾಯಾಲಯದ ಆದೇಶ ಪಾಲಿಸುವುದು ಕೂಡ ಎಲ್ಲರ ಆದ್ಯ ಕರ್ತವ್ಯ ಎಂದರು.
ಹಿಜಾಬ್ ಘಟನೆಗೂ, ಸ್ವಾಮೀಜಿಯವರ ಪೇಟಕ್ಕೂ ಯಾವುದೇ ಸಂಬಂಧ ಇಲ್ಲ. ಭಾರತ ಸಂಸ್ಕೃತಿಯ ಪ್ರತೀಕ ಪೇಟ. ಸ್ವಾಮಿ ವಿವೇಕಾನಂದರು ಹಾಗೂ ವಿಶ್ವೇಶ್ವರಯ್ಯ ಕೂಡ ಪೇಟ ಧರಿಸುತ್ತಿದ್ದರು. ಪೇಟ ಧರಿಸುವ ಸಂಪ್ರದಾಯ ರಾಜ್ಯದಲ್ಲಿ ಇದೆ. ಪೇಟ ಧರಿಸಿ ಧರ್ಮ ಪ್ರಸಾರ ಕಾರ್ಯಕ್ರಮಗಳನ್ನು ಸ್ವಾಮೀಜಿಗಳು ಮಾಡುತ್ತಾ ಬಂದಿದ್ದಾರೆ. ಹಾಗಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯನವರು ತಕ್ಷಣ ಕ್ಷಮೆ ಕೇಳಿ ಸಮಸ್ಯೆಗೆ ಅಂತಿಮ ತೆರೆಯನ್ನು ಎಳೆಯಬೇಕೆಂದು ಸಲಹೆ ನೀಡಿದರು.