ಹರಿಹರ:ಸಮಾಜದ ಅಭಿವೃದ್ಧಿಗಾಗಿ ಭೂಮಿ ಖರೀದಿ ಮಾಡಿರುವುದು ಪ್ರಸನ್ನಾನಂದ ಶ್ರೀಗಳ ಸಮಾಜದ ಅಭಿವೃದ್ಧಿಯ ಕಳಕಳಿ ತೋರಿಸುತ್ತದೆ ಎಂದು ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಶ್ಲಾಘಿಸಿದರು.
ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಪೀಠದ ಆವರಣದಲ್ಲಿ ಹಮ್ಮಿಕೊಂಡಿದ್ದ 2ನೇ ವಾಲ್ಮೀಕಿ ಜಾತ್ರಾ ಮಹೋತ್ಸವದ 2ನೇ ದಿನದ ಕಾರ್ಯಕ್ರಮದಲ್ಲಿ ನಡೆದ ಧರ್ಮ ಸಭೆಯಲ್ಲಿ ಮಾತನಾಡಿದ ಅವರು, ಪ್ರಸನ್ನಾನಂದ ಮಹಾಸ್ವಾಮೀಜಿ ಮತ್ತು ನಾವು ಜೋಡೆತ್ತುಗಳ ರೀತಿಯಲ್ಲಿ ಸಮಾಜದ ಅಭಿವೃದ್ಧಿ ಮಾಡುತ್ತೇವೆ. ರಾಮನ ಜೊತೆಯಿದ್ದ ಹನುಮಂತನ ರೀತಿಯಲ್ಲಿ ಗುರುಗಳ ಜೊತೆಗೆ ಸದಾ ಇರುತ್ತೇವೆ, ಸಮಾಜದ ಅಭಿವೃದ್ಧಿಗೆ ಭಕ್ತರು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಸಮಾಜದ ಏಳ್ಗೆಗಾಗಿ ಮತ್ತು ಸಮಾಜಕ್ಕೆ ನ್ಯಾಯಯುತ ಸೌಲಭ್ಯ ಸಿಗಲು ಶ್ರೀಗಳು ರಾಜನಹಳ್ಳಿಯಿಂದ ರಾಜಧಾನಿಯ ತನಕ ಪಾದಯಾತ್ರೆ ಮಾಡಿರುವುದನ್ನು ಯಾರೂ ಮರೆಯಬಾರದು. ಮೊದಲನೆಯ ವಾಲ್ಮೀಕಿ ಜಾತ್ರೆಯಲ್ಲಿ ಉಳಿದ ಹಣದಲ್ಲಿ ಸಮಾಜದ ಅಭಿವೃದ್ಧಿಗಾಗಿ ಭೂಮಿ ಖರೀದಿ ಮಾಡಿರುವುದು ಶ್ರೀಗಳ ಸಮಾಜದ ಅಭಿವೃದ್ಧಿಯ ಕಳಕಳಿಯನ್ನು ತೋರಿಸುತ್ತದೆ ಎಂದರು.