ದಾವಣಗೆರೆ: ಸರ್ಕಾರ ಮೀಸಲಾತಿ ವಿಚಾರದಲ್ಲಿ ಸಮುದಾಯವನ್ನು ಫುಟ್ಬಾಲ್ ಮಾಡಿಕೊಂಡ್ರೇ, ನನ್ನ ಸಮುದಾಯ ನಿಮ್ಮನ್ನು ಕಿಕ್ ಔಟ್ ಮಾಡುತ್ತೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಶ್ರೀ ಗುಡುಗಿದರು.
ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಗಳನ್ನು ಮಲಗಲು ಬಿಡಬಾರದು. ಸರ್ಕಾರಕ್ಕೆ ಮಲಗಲು ಬಿಟ್ಟರೆ ಮತ್ತೆ ಆರು ತಿಂಗಳು ಕಾಯಬೇಕಾಗುತ್ತದೆ. ಈ ನಾಡಿನ ದೊರೆಯ ಪವರ್ ಅಧಿಕಾರಿಂದ ನಮ್ಮನ್ನು ಅವರು ಮಾತನಾಡಿಸುತ್ತಿಲ್ಲ. ಎಸ್ಸಿ/ಎಸ್ಟಿ ವರ್ಗದ ಮಕ್ಕಳಿಗೆ ಶಿಕ್ಷಣ ಹಾಗು ಉದ್ಯೋಗದಲ್ಲಿ ಮೀಸಲಾತಿ ನೀಡಲು ಈ ಸರ್ಕಾರ ವಿಳಂಬ ಮಾಡುತ್ತಿದೆ ಎಂದರು.
ಮೀಸಲಾತಿ ನೀಡಲು ವರದಿ ಆಯಿತು. ಸಬ್ ಕಮಿಟಿ ಆಯಿತು. ಇವಾಗ ಉನ್ನತ ಕಮಿಟಿ ಮಾಡಿದ್ದಾರಂತೆ. ಮೀಸಲಾತಿ ಎಂಬ ಫುಟ್ಬಾಲ್ ಅನ್ನು ಗೋಲಿಗೆ ಹಾಕಬೇಕು. ಆದರೆ ಈ ಸರ್ಕಾರ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು, ಮೀಸಲಾತಿ ವರದಿಯನ್ನು ಸಬ್ ಕಮಿಟಿ, ಸಬ್ ಕಮಿಟಿಯಿಂದ ಉನ್ನತ ಕಮಿಟಿಗೆ ಫುಟ್ಬಾಲ್ ರೀತಿಯಲ್ಲಿ ಒದೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.