ದಾವಣಗೆರೆ: ನಗರದ ಬಾಪೂಜಿ ಅತಿಥಿ ಗೃಹದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಹೆಚ್ ಆಂಜನೇಯ, ರಾಜ್ಯದಲ್ಲಿ 15 ಕ್ಷೇತ್ರದಲ್ಲಿ ಉಪಚುನಾವಣೆ ಬೇಕಾಗಿತ್ತಾ? ವೈಯಕ್ತಿಕ ಚಟಕೋಸ್ಕರ ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದರು.
ಬಾಪೂಜಿ ಅತಿಥಿ ಗೃಹದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಹೆಚ್ ಆಂಜನೇಯ 15 ಜನ ಶಾಸಕರ ರಾಜೀನಾಮೆ ಹಿಂದೆ ಸ್ವಾರ್ಥ, ಅಧಿಕಾರ ದಾಹ, ಹಣದ ಆಸೆ ಇದೆ, ಪಕ್ಷಕ್ಕೆ ದ್ರೋಹ ಮಾಡಿ ರಾಜೀನಾಮೆ ನೀಡಿ ಈಗ ಚುನಾವಣೆಗೆ ನಿಂತಿದ್ದಾರೆ. ಅವರನ್ನು ಜನರು ಸೋಲಿಸಿ, ತಕ್ಕ ಪಾಠ ಕಲಿಸುತ್ತಾರೆ ಎಂದರು.
ಸುಪ್ರೀಂಕೋರ್ಟ್ ಒಳ್ಳೆ ತೀರ್ಪು ನೀಡಿದೆ, ಇಲ್ಲವಾದ್ರೆ ಅವರು ಸಚಿವರಾಗಿ ನಂತರ ಚುನಾವಣೆಗೆ ಹೋಗುತ್ತಿದ್ದರು. ಪ್ರಜಾಪ್ರಭುತ್ವ ಉಳಿಸಬೇಕು ಎಂದರೆ ಅನರ್ಹರನ್ನು ಅನರ್ಹರನ್ನಾಗೆ ಮಾಡಬೇಕು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ರನ್ನು ಬಫೂನ್ ಎಂದು ರೇಣುಕಾಚಾರ್ಯ ನಿಂದಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಚ್ ಅಂಜನೇಯ, ರೇಣುಕಾಚಾರ್ಯ ಅವರೇ ಬಪೂನ್ ಇರಬೇಕು. ಅದಕ್ಕಾಗಿ ಹಾಗೆ ಮಾತನಾಡುತ್ತಿದ್ದಾರೆ. ಯಾರನ್ನು ಕೂಡ ಟೀಕೆ ಮಾಡಬಾರದು, ಟೀಕೆ ಮಾಡಿದ್ರೆ ಅದು ಆರೋಗ್ಯಕರವಾಗಿರಬೇಕು ಎಂದರು.
ಅನ್ನ ಉಂಡ ಜನ, ಅನ್ನ ನೀಡದಂತಹ ಬಿಜೆಪಿಯನ್ನು ಗೆಲ್ಲಿಸಿದರು. ಕಾಂಗ್ರೆಸ್ ಸರ್ಕಾರ ಇರುವಾಗ ಅನ್ನಭಾಗ್ಯ ಯೋಜನೆ ಮೂಲಕ ಬಡವರ ಹೊಟ್ಟೆ ತುಂಬಿಸಿದ್ವಿ, ಬಡ ಮಕ್ಕಳಿಗೆ ಶಿಕ್ಷಣ, ಶೂ ಭಾಗ್ಯ, ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೆ ತಂದು ಜನರ ಏಳಿಗೆಗಾಗಿ ಶ್ರಮಿಸಿದ್ವಿ. ಆದರೆ ಜನರು ಕಾಂಗ್ರೆಸ್ ಬಿಟ್ಟು ಬಿಜೆಪಿಯನ್ನು ಗೆಲ್ಲಿಸಿದರು. ಕಾಂಗ್ರೆಸ್ ಹಲವಾರು ಯೋಜನೆಗಳನ್ನು ಜಾರಿಗೆ ತಂದರು ಸೋಲಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.