ಬೆಂಗಳೂರು:ಬಿಬಿಎಂಪಿಯ ಅಸಮರ್ಪಕ ಜಿಎಸ್‌ಟಿ ಕಾನೂನಿನ ಅನುಷ್ಠಾನದಿಂದ ಪಾಲಿಕೆ ಮತ್ತು ರಾಜ್ಯ ಸರ್ಕಾರಕ್ಕೆ ಸುಮಾರು ಒಂದು ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆಯು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಮೇಲ್ ಮೂಲಕ ದೂರು ಸಲ್ಲಿಸಿದೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ದಾಖಲೆ ಬಿಡುಗಡೆ ಮಾಡಿದ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಬಿ.ಹೆಚ್.ವೀರೇಶ್, ಬಿಬಿಎಂಪಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿ ಬೃಹತ್ ನಷ್ಟ ಉಂಟು ಮಾಡಿದ್ದಾರೆ ಎಂದು ದೂರಿದರು.
ಇದನ್ನೂ ಓದಿ:ಇಂದಿನಿಂದ ತೆರಿಗೆ ನೀತಿಯಲ್ಲಿ ಭಾರಿ ಬದಲಾವಣೆ.. ಯಾವುದು ಅಗ್ಗ.. ಇನ್ಯಾವುದು ದುಬಾರಿ.. ಈ ಪಟ್ಟಿಯನ್ನೊಮ್ಮೆ ಗಮನಿಸಿ!
ಬಿಲ್ನಲ್ಲಿ ಜಿಎಸ್‌ಟಿ ಪ್ರತ್ಯೇಕವಾಗಿ ವಿಂಗಡಿಸಿಲ್ಲ:ಮುಖ್ಯ ಲೆಕ್ಕ ಪರಿಶೋಧನೆ ಇಲಾಖೆ ಪ್ರಕಾರ ಬಿಬಿಎಂಪಿಯಲ್ಲಿ ಜುಲೈ 1, 2017ರ ನಂತರ ಅನ್ವಯವಾಗುವಂತೆ ನಿರ್ವಹಿಸುವ ಕಾಮಗಾರಿ, ಸರಬರಾಜು, ಗುತ್ತಿಗೆದಾರರಿಂದ ಕಾಯಿದೆಯಲ್ಲಿ ನಿಗದಿಪಡಿಸಿರುವ ಮಾನದಂಡದಂತೆ ಬಿಲ್ ನೀಡಲು ಸಂಬಂಧಪಟ್ಟ ಗುತ್ತಿಗೆದಾರರಿಗೆ, ಸರಬರಾಜುದಾರರಿಗೆ ಪಾಲಿಕೆ ಸೂಚಿಸಬೇಕಿತ್ತು. ಎಲ್ಲ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹಾಲಿ ಚಾಲ್ತಿಯಲ್ಲಿರುವ ಸಿಸಿ ಬಿಲ್ ಜೊತೆ ಕಾಯಿದೆಯಲ್ಲಿ ನಿಗದಿಪಡಿಸಿರುವ ಕ್ರಮಾಂಕಿತ ಗುತ್ತಿಗೆದಾರರ ಬಿಲ್ ಅನ್ನು ಗುತ್ತಿಗೆದಾರರಿಂದ ಪಡೆಯಬೇಕು. ಸರಕುಪಟ್ಟಿ ಬಿಲ್ನಲ್ಲಿ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಯ ವೆಚ್ಚದ ಮೊತ್ತ ರಾಜ್ಯ ಮತ್ತು ಕೇಂದ್ರ ಜಿಎಸ್‌ಟಿ ಪ್ರತ್ಯೇಕವಾಗಿ ವಿಂಗಡಿಸಿ ಎರಡು ಕಾಮಗಾರಿಗಳಿಗೆ ಮುಂಗಡ ಹಣ ಪಾವತಿಸುವ ಸಂದರ್ಭದಲ್ಲೂ ಸಹ ಮೇಲಿನಂತೆ ಕ್ರಮವಹಿಸುವುದು ಎಂದಿದೆ.
ವಿಪರ್ಯಾಸವೆಂದರೆ, ಪಾಲಿಕೆಯಲ್ಲಿ ಬಿಲ್ ಪಾವತಿಸುವಾಗ ಯಾವ ಬಿಲ್ಗಳಲ್ಲೂ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಯ ವೆಚ್ಚದ ಮೊತ್ತ, ಜಿಎಸ್‌ಟಿ ಪ್ರತ್ಯೇಕವಾಗಿ ವಿಂಗಡಿಸಿ ನೀಡುತ್ತಿಲ್ಲ. ಈಗ ಪಾಲಿಕೆಯು ಅನಾವಶ್ಯಕವಾಗಿ ಹೆಚ್ಚಿನ ತೆರಿಗೆ ನೀಡಬೇಕಾದ ಸಂದರ್ಭ ಒದಗಿದೆ. ಜತೆಗೆ ಕಾಮಗಾರಿಗೆ ಉಪಯೋಗಿಸಿದ ಕಬ್ಬಿಣ, ಸಿಮೆಂಟ್, ಕಾಂಕ್ರಿಟ್, ಮರಳು, ಜಲ್ಲಿ, ಬಿಟುಮಿನ್ ಮುಂತಾದ ವಿವರಗಳು ಮತ್ತು ಅವುಗಳಿಗೆ ಸಂದಾಯವಾದ ಜಿಎಸ್‌ಟಿ ತೆರಿಗೆಯ ವಿವರ ಲಭ್ಯವಾಗುವುದಿಲ್ಲ ಎಂದು ಅವರು ವಿವರಿಸಿದರು.