ದಾವಣಗೆರೆ:ರೈತರು ಬರಡು ಭೂಮಿಯಲ್ಲಿ ಕಷ್ಟಪಟ್ಟು ಮೆಕ್ಕೆಜೋಳ ಬೆಳೆ ಬೆಳೆದಿದ್ದರು. ಹೀಗೆ ಬೆಳೆದ ಫಸಲನ್ನು ಹೆಚ್ಚಿನ ಲಾಭಕ್ಕೆ ಮಾರಾಟವೂ ಮಾಡಿದ್ದರು. ಆದ್ರೆ ಆಗಿದ್ದು ಮಾತ್ರ ನಿರಾಶೆ. ಹೊಲದಲ್ಲಿ ಬೆವರು ಸುರಿಸಿ ಕಣ್ಣಲ್ಲಿ ಕಣ್ಣಿಟ್ಟು ಬೆಳೆದ ಫಸಲಿಗೆ ಪ್ರತಿಫಲ ಸಿಗಲಿಲ್ಲ. ಇಷ್ಟಕ್ಕೂ ಇಲ್ಲಿ ಆಗಿದ್ದೇನು?
ಹೌದು, ನೂರಾರು ರೈತರಿಂದ ಮೆಕ್ಕೆಜೋಳ ಖರೀದಿಸಿದವರು ಈಗ ಕೈಗೆ ಸಿಗುತ್ತಿಲ್ಲ. ಹಣಕ್ಕಾಗಿ ಒಂದು ವರ್ಷದಿಂದ ರೈತರು ಸುತ್ತಾಡುತ್ತಿದ್ದಾರೆ. ಒಟ್ಟು 5 ಕೋಟಿ 70 ಲಕ್ಷ ರೂಪಾಯಿ ಬೆಳೆ ಬೆಳೆದ ರೈತರಿಗೆ ಪಾವತಿಯಾಗಬೇಕಿದೆ. ನಮ್ಮ ಹಣವನ್ನು ಯಾರಲ್ಲಿ ಕೇಳುವುದು ಅನ್ನೋದು ರೈತರನ್ನು ಕಾಡುತ್ತಿರುವ ಚಿಂತೆ.
ದಾವಣಗೆರೆ ಜಿಲ್ಲೆಯ ಜಗಳೂರು ಹಾಗು ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ 300ಕ್ಕೂ ಹೆಚ್ಚು ರೈತರು ಮೆಕ್ಕೆಜೋಳ ಮಾರಾಟ ಮಾಡಿದ್ದಾರೆ. ಹರಪ್ಪನಹಳ್ಳಿ ತಾಲೂಕಿನ ಗಡಿಗುಡಾಳ್ ಗ್ರಾಮದಲ್ಲಿರುವ ಕಮಿಷನ್ ಏಜೆಂಟ್ ಶಿವಲಿಂಗಯ್ಯ ಎಂಬಾತನಿಗೆ ರೈತರು ಟನ್‌ಗಟ್ಟಲೆ ಮೆಕ್ಕೆಜೋಳ ವ್ಯಾಪಾರ ಮಾಡಿದ್ದಾರೆ. ಹೀಗೆ ವ್ಯಾಪಾರ ಮಾಡಿ, ಕಳೆದೊಂದು ವರ್ಷದ ಹಣವಿಲ್ಲದೆ ಕಂಗಾಲಾದ ರೈತರು ವ್ಯಾಪಾರಿಯ ಮನೆ ಮುಂದೆ ಅಲೆಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಇರುವ ದರಕ್ಕಿಂತ 50 ರಿಂದ 100 ರೂಪಾಯಿ ಜಾಸ್ತಿ ಸಿಗುತ್ತದೆ ಅಂತ ಮೆಕ್ಕೆಜೋಳ ಕೊಟ್ಟು ಹಣ ಪಡೆಯದೆ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ.
ನಕಲಿ ಖಾತೆ ಸೃಷ್ಟಿಸಿ ಮೋಸ ಈ ರೀತಿ ನಡೆಯುತ್ತೆ..
ಈ ವಂಚಕ ವ್ಯಾಪಾರಿ ಬೇರೆ ಬೇರೆ ರಾಜ್ಯಗಳಿಗೆ ಮೆಕ್ಕೆಜೋಳ ಮಾರಾಟ ಮಾಡಿದ್ದಾರೆ. ಅಲ್ಲಿಂದ ಬರುವ ಹಣವನ್ನು ಸಾವಿಗೀಡಾರುವ 15 ಜನರ ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ 5 ಕೋಟಿ 70 ಲಕ್ಷ ರೂಪಾಯಿ ರೈತರ ಹಣ ನುಂಗಿ ಸುಮ್ಮನಾಗಿದ್ದಾರೆ. ಅಲ್ಲದೇ ಕ್ಯಾನ್ಸರ್ ರೋಗಿ, ಸಾವನ್ನಪ್ಪಿದವರ ಹೆಸರಿನಲ್ಲಿ ನಕಲಿ ಖಾತೆ ತೆರೆದು ರೈತರಿಗೆ ಸೇರಬೇಕಾದ ಹಣವನ್ನು ನುಂಗಿ ನೀರು ಕುಡಿದಿದ್ದಾರೆ.
ಈ ನಕಲಿ ಖಾತೆ ವಿಚಾರದಲ್ಲಿ ದಾವಣಗೆರೆಯ ಪಿ.ಬಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ಗೆ ಹೋಗಿ ವಿಚಾರಿಸಿದಾಗ ಬ್ಯಾಂಕ್‌ನ ಕ್ಲರ್ಕ್ ಶಿವಕುಮಾರ್ ಎನ್ನುವವರು ಕೂಡ ಆರೋಪಿಗಳ ಜೊತೆ ಶಾಮೀಲಾಗಿದ್ದು, ನಕಲಿ ಖಾತೆಗಳನ್ನು ಇವರೇ ಸೃಷ್ಟಿ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿದೆ ಎಂಬ ಗಂಭೀರ ಆರೋಪವೂ ಕೇಳಿ ಬಂದಿದೆ.