ದಾವಣಗೆರೆ: ದಾವಣಗೆರೆ ತಾಲೂಕಿನ ತುಂಬಿಗೆರೆ ಗ್ರಾಮದಲ್ಲಿ ಜನರು ನಿರ್ಭೀತಿಯಿಂದ ಓಡಾಡುವಂತಿಲ್ಲ. ರೈತರು ಟ್ರಾಕ್ಟರ್ನೊಂದಿಗೆ ಜಮೀನಿಗೆ ಹೋದ್ರೆ ಸಾಕು ಮಗನಿಂದ ದಾಳಿ ಖಚಿತ. ಇರೋದು ಒಂದೇ ಕೋತಿಯಾದ್ರೂ, ಇಡೀ ಗ್ರಾಮದಲ್ಲಿ ಭಯ ಹುಟ್ಟುವಂತೆ ಮಾಡಿದೆ. ಮಂಗನ ದಾಳಿ ಭಯದಿಂದ ಜನರು ಮನೆ ಬಿಟ್ಟು ಹೊರಬಾರದ ಪರಿಸ್ಥಿತಿ ನಿರ್ಮಾಣ ಆಗಿದೆ.
ಕಳೆದ ಮೂರು ತಿಂಗಳಿನಿಂದ ಈ ಗ್ರಾಮದಲ್ಲಿ ಕೋತಿ ಕಾಟ ಶುರುವಾಗಿದೆ. ಹೋಗಲಿ ಬಿಡಿ ಅಂತ ಗ್ರಾಮಸ್ಥರು ಸುಮ್ಮನಿದ್ದರೂ ಕೂಡ ಕೋತಿ ಚೇಷ್ಠೆ ಹೆಚ್ಚಾಗಿದೆ. ಪರಿಣಾಮ ಜನರು ಮನೆಯಿಂದ ಹೊರಬರಲು ಆತಂಕ ಪಡುವಂತಾಗಿದೆ.
ಈಗಾಗಲೇ ಹತ್ತಕ್ಕೂ ಹೆಚ್ಚು ಜನರ ಮೇಲೆ ಈ ಕೋತಿ ದಾಳಿ ಮಾಡಿದೆ. ಜಮೀನಿಗೆ ಹೋಗುವ ಟ್ರಾಕ್ಟರ್ ಸದ್ದು ಕಿವಿಗೆ ಬಿದ್ದರೆ ಸಾಕು ನೇರವಾಗಿ ಬಂದು ದಾಳಿ ಮಾಡುತ್ತದೆ. ಶಾಲೆಯ ಮಕ್ಕಳ ಮೇಲೆ ಹೆಚ್ಚು ದಾಳಿ ಮಾಡಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಈ ವಿಚಾರವನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದು, ಸಿಬ್ಬಂದಿ ಬೋನ್ ಇಟ್ಟು ಕೋತಿ ಸೆರೆಗೆ ಪ್ರಯತ್ನಿಸಿದ್ರೂ ಕೂಡ ಪ್ರಯತ್ನ ವಿಫಲ ಆಗಿದೆ.