ದಾವಣಗೆರೆ:ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ಮಾಡಿಸಿದ್ದಕ್ಕಾಗಿ ನೂತನ ಎಸ್ಪಿ ರಿಷ್ಯಂತ್ ವಿರುದ್ಧ ಹೊನ್ನಾಳಿ ಶಾಸಕ ರೇಣುಕಚಾರ್ಯ ಗರಂ ಆಗಿದ್ದಾರೆ. ಫೋನ್‌ನಲ್ಲೇ ಅವಾಜ್ ಹಾಕಿರುವ ಘಟನೆ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ಬಳಿ ನಡೆದಿದೆ.
ದೊಡ್ಡ ಹೀರೋ ಏನ್ರಿ...? ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ಮಾಡಿದ್ದಕ್ಕೆ ಎಸ್ಪಿ ವಿರುದ್ಧ ರೇಣುಕಾಚಾರ್ಯ ಗರಂ ದಾವಣಗೆರೆ ಎಸ್ಪಿ ರಿಷ್ಯಂತ್ ಮರಳು ಅಡ್ಡೆಗಳ ಮೇಲೆ ದಾಳಿಗೆ ಸೂಚಿಸಿದ್ದಕ್ಕೆ ಸಿಪಿಐ ದೇವರಾಜ್‌ಗೆ ಕರೆ ಮಾಡಿ ಅಸಮಾಧಾನ ಹೊರ ಹಾಕಿದ್ದಾರೆ. ನೂತನ ಎಸ್ಪಿ ರಿಷ್ಯಂತ್ ಮರಳು ಅಡ್ಡೆ ಮೇಲೆ ರೇಡ್ ಮಾಡುವಂತೆ ಆಯಾ ಪೊಲೀಸ್ ಠಾಣೆಯ ಪೊಲೀಸರಿಗೆ ಸೂಚನೆ ನೀಡಿದ್ದರು. ಎಸ್ಪಿ ಸೂಚನೆ ಮೇರೆಗೆ ಭಾನುವಾರ ಹೊನ್ನಾಳಿ ತಾಲೂಕಿನ ಹರಳಹಳ್ಳಿ, ಹಿರೇಮಳಲಿಯ ಮರಳು ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದರು.
ಇದು ತಮ್ಮ ಗಮನಕ್ಕೆ ಬರುತ್ತಿದ್ದಂತೆ ರೇಣುಕಾಚಾರ್ಯ, ಹೊನ್ನಾಳಿ ಸಿಪಿಐ ದೇವರಾಜ್‌ಗೆ ಕರೆ ಮಾಡಿ ಎಸ್ಪಿ ವಿರುದ್ಧ ಗರಂ ಆಗಿದ್ದಾರೆ. ದಾಳಿ ಮಾಡಿದ್ದೀರಾ, ದೊಡ್ಡ ಹೀರೋ ಏನ್ರಿ, ಮಟ್ಕಾ ಆಡೋರನ್ನ ಜೂಜಾಡೋರನ್ನ ಹಿಡೀರಿ, ಇಲ್ಲಿ ಸ್ಟಂಟ್ ಮಾಡೋಕೆ ಬಂದ್ರೆ ನಡೆಯಲ್ಲ ಎಂದಿದ್ದಾರೆ.
ಮರಳು ಗಣಿಗಾರಿಕೆ ಮಾಡೋರು ಅತ್ಯಾಚಾರ ಕೊಲೆ ಮಾಡಿದ್ದಾರಾ?, ಹೊಟ್ಟೆ ಪಾಡಿಗೆ ಮರಳು ಗಣಿಗಾರಿಕೆ ಮಾಡುತ್ತಿದ್ದಾರೆ ಅವರ ತಂಟೆಗೆ ಬಂದ್ರೆ ನಾನು ಸುಮ್ಮನಿರಲ್ಲ. ತಾಖತ್ ಇದ್ರೆ ಸೀಜ್ ಮಾಡ್ರಿ ಎಂದು ಸಿಪಿಐ ದೇವರಾಜ್ ಜೊತೆ ಮಾತನಾಡುತ್ತಾ ಎಸ್ಪಿಗೆ ರೇಣುಕಾಚಾರ್ಯ ಆವಾಜ್ ಹಾಕಿದ್ದಾರೆ.
ಮೊನ್ನೆ ಹೊನ್ನಾಳಿ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗೆ ಅವಾಜ್ ಹಾಕಿದ್ದ ಶಾಸಕ ಇಂದು ಎಸ್ಪಿಗೆ ಆವಾಜ್ ಹಾಕಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ.