ದಾವಣಗೆರೆ:ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಅನೇಕ ಬಾರಿ ನಾಯಕತ್ವದ ಬದಲಾವಣೆ ಇಲ್ಲ ಎಂದು ಹೇಳಿದ್ದು, ಇಂದು ಸಹ ಸ್ಪಷ್ಟವಾಗಿ ಸಂದೇಶವನ್ನು ನೀಡಿದ್ದಾರೆ. ಮೋದಿ, ಅಮಿತ್ ಶಾ ಸೇರಿದಂತೆ ಪಕ್ಷದ ಹಿರಿಯ ನಾಯಕರ ಜೊತೆ ಕರ್ನಾಟಕದಲ್ಲಿ ನಾಯಕತ್ವದ ಬಗ್ಗೆ ಚರ್ಚೆ ಆಗಿಲ್ಲ. ಇಲ್ಲಿ ಯಾರೋ ಒಬ್ಬಿಬ್ಬರು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಸಚಿವ ಸಿ.ಪಿ. ಯೋಗೆಶ್ವರ್ಗೆ ರೇಣುಕಾಚಾರ್ಯ ಪರೋಕ್ಷವಾಗಿ ಟಾಂಗ್ ನೀಡಿದರು.
ಓದಿ: ಲಾಕ್ಡೌನ್ ವಿಸ್ತರಣೆ ಮಾಡಿದ್ರೆ ಆರ್ಥಿಕ ಚಟುವಟಿಕೆಗೆ ಏನಪ್ಪಾ ಮಾಡೋದು?: ಬಿಎಸ್ವೈ
ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಆಗುತ್ತದೆ, ನಾನು ಸಿಎಂ ಆಗಬಹುದು ಎಂದು ಕನಸು ಕಾಣುತ್ತಿದ್ದಾರೆ. ಇವರು ಪಕ್ಕದ ಕ್ಷೇತ್ರ ಗೆಲ್ಲಿಸಲು ಸಾಧ್ಯವಾಗದವರು, ಅವರ ಕ್ಷೇತ್ರದ ಜನರ ಜೊತೆಯಲ್ಲಿಯೇ ಇರದವರು ಹೀಗೆ ಮಾತನಾಡುತ್ತಿದ್ದಾರೆ. ಇನ್ನು ಈ ಗೊಂದಲಗಳಿಗೆ ಅರುಣ್ ಸಿಂಗ್ ತೆರೆ ಎಳೆದಿದ್ದು, ಅರುಣ್ ಸಿಂಗ್ ರವರಿಗೆ ಧನ್ಯವಾದ ತಿಳಿಸಿದರು.
ಕೆಲವರು ದೆಹಲಿಗೆ ಹೋಗಿರುವುದು, ಹೋಗುವಾಗ ಮಾಧ್ಯಮಗಳಿಗೆ ರಾಷ್ಟ್ರ ನಾಯಕರ ಭೇಟಿ ಮಾಡುತ್ತೇವೆ ಎಂದು ಹೇಳಿ ಹೋಗುತ್ತಾರೆ. ಅಲ್ಲಿ ರಾಷ್ಟ್ರ ನಾಯಕರ ಮನೆ ಗೇಟ್ ಮುಟ್ಟಿ ವಾಪಸ್ ಬರುತ್ತಾರೆ. ಅಲ್ಲದೇ ನಾವು ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದ್ದು, ಇಷ್ಟರಲ್ಲೇ ನಾಯಕತ್ವ ಬದಲಾವಣೆ ಆಗುತ್ತೆ ಎಂದು ಹೇಳುತ್ತಾರೆ.
ಅರುಣ್ ಸಿಂಗ್ ರಾಜ್ಯಕ್ಕೆ ಬಂದಾಗ ಶಾಸಕರೆಲ್ಲ ಅವರನ್ನು ಭೇಟಿ ಮಾಡುತ್ತೇವೆ. ಯಡಿಯೂರಪ್ಪನವರ ಜೊತೆ ನಾವೀದ್ದೇವೆ ಎನ್ನುವ ಸಂದೇಶವನ್ನು ಕೊಡುತ್ತೇವೆ. ಯಡಿಯೂರಪ್ಪನವರ ನಾಯಕತ್ವದ ಮೇಲೆ ವಿಶ್ವಾಸ ಇಟ್ಟು ಸಹಿ ಸಂಗ್ರಹ ಮಾಡಿದ್ದೇವೆ. ಆದರೆ ಆ ಪತ್ರಗಳು, ಸಹಿಗಳು ನಮ್ಮ ಬಳಿಯೇ ಇವೆ. ಮುಖ್ಯಮಂತ್ರಿಗಳು ಹಾಗು ರಾಜ್ಯನಾಯಕರು ಸಹಿ ಸಂಗ್ರಹ ಮಾಡೋದು ಬೇಡ ಎಂದು ಹೇಳಿದ್ದಕ್ಕೆ ಸುಮ್ಮನಾಗಿದ್ದೇವೆ ಎಂದರು.