ದಾವಣಗೆರೆ:ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಮಂಡ್ಯದ ವಿದ್ಯಾರ್ಥಿನಿಯನ್ನು ಬೆಂಬಲಿಸಿ ಅಲ್‌ಖೈದಾ ಉಗ್ರನ ವಿಡಿಯೋ ಹಿಂದೆ ಆರ್‌ಎಸ್‌ಎಸ್ ಕೈವಾಡ ಇದೆ ಎಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ. ಆಲ್ ಖೈದಾ ಉಗ್ರಗಾಮಿ ಸಂಘಟನೆ ಮುಖ್ಯಸ್ಥನನ್ನು ಸಿದ್ದರಾಮಯ್ಯ ಮುಂದೊಂದು ದಿನ ವೀರ ಸ್ವಾತಂತ್ರ್ಯ ಹೋರಾಟಗಾರರಾಗಿ ಕಂಡರೂ ಅಚ್ಚರಿಯಿಲ್ಲ ಎಂದು ಟೀಕಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರೇಣುಕಾಚಾರ್ಯ, ಇಂತಹ ಸೈತನಾರನ್ನೇ ಪೋಷಿಸಿಕೊಂಡು ಬಂದಿರುವುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ನಿಮ್ಮ (ಸಿದ್ದರಾಮಯ್ಯ) ಹೇಳಿಕೆಯಲ್ಲಿ ನಮಗೆ ಹೊಸದೇನೂ ಕಾಣುತ್ತಿಲ್ಲ. ಅತಿಯಾದ ಓಲೈಕೆಯ ಪರಿಣಾಮ 2018 ರ ಚುನಾವಣೆಯಲ್ಲಿ ನಿಮ್ಮ ಪಕ್ಷದ ಸ್ಥಿತಿ ಏನಾಯಿತು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ. ಇದು ಆರ್‌ಎಸ್‌ಎಸ್ ಸೃಷ್ಟಿ ಎನ್ನುವ ನಿಮಗೆ ಆತ್ಮಸಾಕ್ಷಿ ಎಂಬುದಿದ್ದರೆ, ಅಲ್‌ಖೈದಾದ ಮುಖವಾಣಿ ಅಸ್ -ಸಾಹಬ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಅಮನ್-ಅಲ್ -ಜವಾಹಿರಿಯ ವಿಡಿಯೋ ಒಂದು ಬಾರಿ ನೋಡಿ ನಂತರ ಸಂಘ ಪರಿವಾರದ ಬಗ್ಗೆ ಮಾತನಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.