ದಾವಣಗೆರೆ:ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹತಾಶರಾಗಿದ್ದಾರೆ. ಆದರೆ ಮುಖ್ಯಮಂತ್ರಿ ಆಗಿದ್ದವರು ಮಾತನಾಡುವಾಗ ಘನತೆಯಿಂದ ಮಾತನಾಡಲಿ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು. ಆರ್ಎಸ್ಎಸ್ ಬಗ್ಗೆ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಆರ್ಎಸ್ಎಸ್ ನವರಿಗೆ ಶೇ. 40ರಷ್ಟು ಕಮಿಷನ್ ಕೊಡುತ್ತಾರೆ ಅಂದ್ರೆ ಏನು ಅರ್ಥ? ಎಂದು ಪ್ರಶ್ನಿಸಿದರು.
ಆರ್ಎಸ್ಎಸ್ ಒಂದು ದೇಶಭಕ್ತ ಸಂಘಟನೆ. ಇದರ ಬಗ್ಗೆ ಮಾತನಾಡುವುದು ಸರಿಯಲ್ಲ. ಮೇಲಾಗಿ ಕುಮಾರಸ್ವಾಮಿ ಅವರಿಗೆ ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಇದೇ ಕಾರಣಕ್ಕೆ ಈ ರೀತಿಯಾದ ಆರೋಪಗಳನ್ನು ಮಾಡುತ್ತಿದ್ದಾರೆ. ಇಂತಹ ಹೇಳಿಕೆ ನೀಡುವಾಗ ಸ್ವಲ್ಪ ವಿಚಾರಿಸಿ ಮಾತನಾಡಬೇಕು ಎಂದು ಸಲಹೆ ನೀಡಿದರು.
33 ಲಕ್ಷ ರೈತರಿಗೆ ಸಾಲ:ರಾಜ್ಯದಲ್ಲಿ 24 ಸಾವಿರ ಕೋಟಿ ರೂ.ಸಾಲವನ್ನು ರಾಜ್ಯದ 33 ಲಕ್ಷ ರೈತರಿಗೆ ನೀಡಲು ನಿರ್ಧರಿಸಲಾಗಿದೆ. ಇದರಲ್ಲಿ 3 ಲಕ್ಷ ಹೊಸ ರೈತರಿಗೆ ಸಾಲ ನೀಡಲು ನಿರ್ಧರಿಸಲಾಗಿದೆ. ಸಾಲ ನೀಡುವಲ್ಲಿ ಯಾವುದೇ ರೀತಿ ಗೊಂದಲಕ್ಕೆ ಆಸ್ಪದ ಇಲ್ಲ ಎಂದರು.
ಯಶಸ್ವಿನಿ ಯೋಜನೆ ಮತ್ತೆ ಆರಂಭ:ಯಶಸ್ವಿನಿ ಯೋಜನೆ ಅಕ್ಟೋಬರ್ 2 ರಿಂದ ಜಾರಿಗೆ ಸಾಧ್ಯತೆೆಯಿದೆ. ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆ ಯಶಸ್ವಿನಿ ಯೋಜನೆ ಮತ್ತೆ ಆರಂಭವಾಗಲಿದೆ. ಈಗಾಗಲೇ ಇಲಾಖೆ ಕಡೆಯಿಂದ ಎಲ್ಲ ತಯಾರಿ ಆಗಿದೆ. ಈ ಬಗ್ಗೆ ಸಿಎಂ ಜೊತೆ ಚರ್ಚಿಸಲಾಗಿದೆ. ಅ.2ರಂದು ಉದ್ಘಾಟನೆ ಆಗುವ ಸಾಧ್ಯತೆ ಇದೆ. ಈಗಾಗಲೇ ಹಾಲು ಉತ್ಪಾಕರಿಗೆ ಅನುಕೂಲ ಆಗುವಂತೆ ಕ್ಷೀರ ಸಹಕಾರ ಬ್ಯಾಂಕ್ ಆರಂಭದ ಯೋಜನೆ ಇದೆ. ಇದರಲ್ಲಿ 9 ಲಕ್ಷ ಮಹಿಳೆಯರಿಗೆ ಸಾಲ ಸೌಲಭ್ಯವ ನೀಡುವ ಉದ್ದೇಶವಿದೆ ಎಂದರು.