ದಾವಣಗೆರೆ:ರಾಜ್ಯದಲ್ಲಿ ಈ ಮೂರನೇ ಅಲೆ ಸೆಪ್ಟಂಬರ್ ವೇಳೆಗೆ ಅಪ್ಪಳಿಸಲಿದೆ ಎಂದು ತಜ್ಞರ ಸಮಿತಿ ವರದಿ ನೀಡಿದೆ. ಇದರೊಂದಿಗೆ ಈ ಅಲೆಯನ್ನು ನಿಯಂತ್ರಿಸಲು ಕೆಲವು ಶಿಫಾರಸುಗಳನ್ನು ಸಹ ಮಾಡಿದೆ. ಈ ಹಿನ್ನೆಲೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ರಕ್ಷಣೆ ಸರ್ಕಾರದ ಮುಂದಿರುವ ಬಹುದೊಡ್ಡ ಜವಾಬ್ದಾರಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಓದಿ: ಚಲನಚಿತ್ರ, ಕಿರುತೆರೆ ರಂಗದವರಿಗೆ ಆರ್ಥಿಕ ನೆರವು: ಸೇವಾಸಿಂಧು ಪೋರ್ಟಲ್ನಲ್ಲಿ ಅರ್ಜಿ ಆಹ್ವಾನ
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ನಡೆದ ಸಚಿವರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ 4 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸರ್ಕಾರ ಮೊದಲಿಗೆ ಕ್ರಮ ಕೈಗೊಳ್ಳಬೇಕಾಗಿದೆ. ಅಪೌಷ್ಟಿಕತೆ ಇರುವ ಮಕ್ಕಳಿಗೆ ಪೌಷ್ಟಿಕ ಆಹಾರ ಔಷಧಗಳನ್ನು ಸರ್ಕಾರ ನೀಡಲಿದೆ ಎಂದರು.
ಮಕ್ಕಳಿಗೆ ಯಾವ ರೀತಿ ಪೌಷ್ಟಿಕ ಆಹಾರ ಬೇಕು ಎಂಬುದನ್ನು ಈಗಾಗಲೇ ಮಕ್ಕಳ ತಜ್ಞರೊಡನೆ ಚರ್ಚಿಸಲಾಗಿದೆ. ಅಪೌಷ್ಟಿಕತೆ ಇರುವ ಮಕ್ಕಳ ತಾಯಂದಿರಿಗೆ ಮೊದಲಿಗೆ ವ್ಯಾಕ್ಸಿನ್ ಹಾಕಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸಚಿವೆ ಜೊಲ್ಲೆ ತಿಳಿಸಿದರು.
ಪ್ರತಿ ಜಿಲ್ಲೆಯಲ್ಲೂ ಮಕ್ಕಳ ಕೋವಿಡ್ ಕೇರ್ ಸೆಂಟರ್:
ಪ್ರತಿ ಜಿಲ್ಲೆಯಲ್ಲೂ ಮಕ್ಕಳ ಕೋವಿಡ್ ಕೇರ್ ಸೆಂಟರ್ ತೆರೆಯಲಾಗುತ್ತಿದ್ದು, ತೀವ್ರ ಅಪೌಷ್ಟಿಕತೆವುಳ್ಳ ಮಕ್ಕಳಲ್ಲಿ ಕೋವಿಡ್ ಪರಿಣಾಮಕಾರಿಯಾಗುತ್ತಿದೆ. ಈ ಹಿನ್ನೆಲೆ ತೀವ್ರ ಅಪೌಷ್ಟಿಕತೆ ಮಕ್ಕಳನ್ನು ಗುರುತಿಸಿ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ದಾವಣಗೆರೆಯಲ್ಲಿ ಮಕ್ಕಳ 9 ಕೋವಿಡ್ ಕೇರ್ ಸೆಂಟರ್ ತೆರೆಯಲಾಗುತ್ತಿದೆ. ಒಟ್ಟು 100 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ. ವೆಂಟಿಲೇಟರ್ ಬೆಡ್ಗೆ ಬೇಡಿಕೆ ಬಂದಿದ್ದು, ಎರಡು ವರ್ಷದಲ್ಲಿ ದಾವಣಗೆರೆಯಲ್ಲಿ 4,158 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ.
ಶಾಲೆ ಪ್ರಾರಂಭಕ್ಕೆ ತಜ್ಞರ ವರದಿ ಹಿನ್ನೆಲೆಯಲ್ಲಿ ತಜ್ಞರಾದ ಡಾ ದೇವಿ ಪ್ರಸಾದ್ ಶೆಟ್ಟಿ ಅವರಿಂದ ಸರ್ಕಾರಕ್ಕೆ ವರದಿ ಬಂದಿದ್ದು, ಮೂರನೇ ಅಲೆ ಭೀತಿ ಹಿನ್ನಲೆ ಶಿಕ್ಷಣ ಸಚಿವರು ಜೊತೆ ಸಭೆ ನಡೆಸಲಾಗಿದೆ, ಕಡಿಮೆ ಸೋಂಕು ಇರುವ ಜಿಲ್ಲೆಯಲ್ಲಿ ಶಾಲಾ ಪ್ರಾರಂಭಿಸುವುದು ಸೂಕ್ತ, ಹಲವು ನಿಯಮ ಬಳಸಿ ಶಾಲೆ ತೆರೆಯಲು ತಜ್ಞರು ಅಭಿಪ್ರಾಯಿಸಿದ್ದಾರೆ.
ಆದರೆ ನಮ್ಮ ಇಲಾಖೆಗೆ ವರದಿ ಇನ್ನೂ ಬಂದಿಲ್ಲ. ಕೋವಿಡ್ ಕಡಿಮೆ ಇರುವ ಜಿಲ್ಲೆಯಲ್ಲಿ ಶಾಲೆ ಶುರು ಮಾಡಬೇಕು ಎಂಬುದು ನನ್ನ ಅಭಿಪ್ರಾಯ. ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸಲು ಇಲಾಖೆ ಕೆಲಸ ಮಾಡುತ್ತಿದೆ ಎಂದರು.