ದಾವಣಗೆರೆ:ಜಿಲ್ಲೆಯಲ್ಲಿ ಜಗಳೂರು ಅತ್ಯಂತ ಹಿಂದುಳಿದ ತಾಲೂಕು. ಈ ತಾಲೂಕಿನಲ್ಲಿ ಇಂದಿಗೂ ಕೂಡ ಹನಿ ನೀರಿಗೂ ಹಾಹಾಕಾರವಿದೆ. ಜನರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಅತ್ತ ಜಾನುವಾರುಗಳಿಗೆ ಮೇವು ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲೆಯ ಶಾಸಕರು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪರ ಮುಂದೆ ತೋಡಿಕೊಂಡರು.
ಜಿಲ್ಲೆಯಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲೆಯ ಶಾಸಕರು ಜಿಲ್ಲೆಯ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಟ್ಟರು. ಜಗಳೂರು ತಾಲೂಕಿನಲ್ಲಿ ಹನಿ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ ಜನರು ಅನಿವಾರ್ಯವಾಗಿ ಟ್ಯಾಂಕರ್ ನೀರಿನ ಮೊರೆ ಹೋಗಿದ್ದು, ಸುಮಾರು ಜಗಳೂರು ತಾಲೂಕಿನ 87 ಗ್ರಾಮಗಳಿಗೆ ನಿತ್ಯ 138 ಟ್ಯಾಂಕರ್ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಟ್ಯಾಂಕರ್ ನೀರಿನಲ್ಲಿ ಹುಳ, ಹುಪ್ಪಟೆಗಳು ಸಿಗುತ್ತಿದ್ದು, ಜನರು ಅದೇ ನೀರನ್ನು ಬಳಸುವ ಅನಿವಾರ್ಯತೆ ಎದುರಾಗಿದೆ ಎಂದು ಜಗಳೂರು ಶಾಸಕ ಎಸ್.ವಿ.ರಾಮಚಂದ್ರಪ್ಪ ಸಚಿವರ ಎದುರು ಬೇಸರ ವ್ಯಕ್ತಪಡಿಸಿದರು.