ದಾವಣಗೆರೆ : ಕಾಂಗ್ರೆಸ್ ನಾಯಕರು ಹುಚ್ಚುಚ್ಚಾಗಿ ಏನೇನೋ ಮಾತನಾಡುತ್ತಿದ್ದಾರೆ. ಸ್ವಯಂಸೇವ ಸಂಘ ಇಲ್ಲದೆ ಹೋಗಿದ್ದರೆ, ಈ ದೇಶವನ್ನು ಕಟ್ಟಲು ಸಾಧ್ಯವಾಗುತ್ತಿರಲಿಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ಆರ್‌ಎಸ್ಎಸ್ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷದ ನಾಯಕರಿಗೆ ಎಲ್ಲೋ ಸೋಲಿನ ಭೀತಿ ಕಾಡುತ್ತಿದೆ. ಹಾಗಾಗಿ, ಏನೇನೋ ಮಾತನಾಡುತ್ತಿದ್ದಾರೆ ಎಂದು ಕುಟುಕಿದರು.
ದೇಶ ಉಳಿದಿದೆ ಎಂದರೆ ಅದು ಆರ್ಎಸ್ಎಸ್ನಿಂದ ಮಾತ್ರ. ಆ ಸಂಘಟನೆ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನಿಂದ ಹಿಡಿದು ಪ್ರತಿಯೊಬ್ಬರು ಎಚ್ಚರಿಕೆಯಿಂದ ಮಾತನಾಡಬೇಕು. ಏಕೆಂದರೆ, ಈ ದೇಶಕ್ಕೆ ಆರ್‌ಎಸ್ಎಸ್ ಕೊಡುಗೆ ಅಪಾರ. ನಾವು ಹಾಗೂ ಈ ದೇಶ ಸುಭದ್ರವಾಗಿದೆ ಎಂದರೆ ಅದಕ್ಕೆ ಕಾರಣ ಆರ್‌ಎಸ್ಎಸ್.
ಇದನ್ನು ಅರಿತುಕೊಂಡು ಅವರು ಮಾತನಾಡಬೇಕಿದೆ. ಪ್ರತಿಯೊಬ್ಬ ಆರ್‌ಎಸ್ಎಸ್ ಕಾರ್ಯಕರ್ತ ದೇಶದ ಬಗ್ಗೆ ಚಿಂತನೆ ನಡೆಸುತ್ತಿದ್ದಾನೆ. ಇತಂಹವರ ಬಗ್ಗೆ ಮಾತ್ನಾಡುವುದು ಶೋಭೆ ತರುವಂತಹದಲ್ಲ. ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಾಬ್ರಿ ಮಸೀದಿ ಕೆಡವಿ ಅಲ್ಲಿ ಏನ್ಮಾಡ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಬಾಬ್ರಿ ಮಸೀದಿ ಕೆಡವಿದ ಸ್ಥಳದಲ್ಲೇ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಇಡೀ ಪ್ರಪಂಚ ನೋಡಲಿರುವ ಈ ಭವ್ಯ ಮಂದಿರವನ್ನು ಕಟ್ಟುವುದನ್ನು ಇವರು ಕೂಡ ಹೋಗಿ ನೋಡಲಿ ಎಂದರು.