ದಾವಣಗೆರೆ :ರೈತರದ್ದು ದಲ್ಲಾಳಿಗಳ ಪ್ರೇರಿತ ಪ್ರತಿಭಟನೆ ಎಂದು ಹೇಳುವ ಮೂಲಕ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರೈತರ ಹೋರಾಟದ ಹಿಂದೆ ದಲ್ಲಾಳಿಗಳಿದ್ದಾರೆ. ರೈತರ ಸಮಸ್ಯೆಗಳನ್ನು ಆಲಿಸಲು ಸಿಎಂ ಸಿದ್ದರಿದ್ದಾರೆ. ಆದರೆ, ಯಾವ ರೈತ ಮುಖಂಡರು ಸಮಸ್ಯೆ ಹಂಚಿಕೊಳ್ಳಲು ಸಿದ್ದರಿಲ್ಲ. ನಮ್ಮ ಸರ್ಕಾರ ರೈತರ ಪರವಾಗಿದೆ ಎಂದರು.
ಇದನ್ನೂ ಓದಿ...ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು, ಹಾಗೆ ಮಾಡುವವರು ಹೇಡಿಗಳು: ಬಿ.ಸಿ.ಪಾಟೀಲ್
ಗೋಹತ್ಯೆ ನಿಷೇಧ ಕಾನೂನು ಜಾರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜಿಲ್ಲೆಗೊಂದರಂತೆ ಗೋ ಶಾಲೆ ಪ್ರಾರಂಭಿಸುವ ಚಿಂತನೆ ಇದೆ. ಅದರ ಉಸ್ತುವಾರಿಗೆ ಅಧಿಕಾರಿಗಳ ನೇಮಕ ಮಾಡಲಾಗುತ್ತಿದೆ.
ಈ ಬಗ್ಗೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ ಎಂದು ಹೇಳಿದರು. ಪ್ರತಿಪಕ್ಷಗಳು ಇರುವುದೇ ವಿರೋಧಿಸಲು. ಹೀಗಾಗಿ ಅವರ ಹೇಳಿಕೆ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.
ಮಿತ್ರಮಂಡಳಿಯ ಶಾಸಕರ ಸಭೆ ವಿಚಾರವಾಗಿ ಮಾತನಾಡಿದ ಅವರು, ತುಂಬಾ ದಿನದಿಂದ ನಾವೆಲ್ಲರೂ ಸೇರಿದ್ದಿಲ್ಲ. ಹೀಗಾಗಿ ಎಲ್ಲರೂ ಒಟ್ಟಾಗಿ ಸೇರಿ ಊಟ ಮಾಡಿದೆವು. ಊಟಕ್ಕೆ ಸೇರಿ ಚರ್ಚೆ ಮಾಡಿದ್ದು ನಿಜ. ಮಿತ್ರ ಮಂಡಳಿಯಲ್ಲಿ ಮೂವರಿಗೆ ಸಚಿವ ಸ್ಥಾನ ನೀಡುವಂತೆ ಸಿಎಂಗೆ ಕೇಳಿದ್ದೇವೆ ಎಂದು ಹೆಚ್.ವಿಶ್ವನಾಥ್ ಪರ ಮಾತನಾಡಿದರು.