ದಾವಣಗೆರೆ: ಕೋವಿಡ್ ಸಮಯದಲ್ಲಿ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡಿದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡದ ಆರೋಪ ಕೇಳಿ ಬಂದಿದೆ. ತಮಗೆ ಶಿಷ್ಯ ವೇತನ ನೀಡಬೇಕೆಂದು ಪ್ರತಿಷ್ಠಿತ ಬಾಪೂಜಿ ಸಂಸ್ಥೆಗೆ ಸೇರಿದ ಜೆಜೆಎಂ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು ದಾವಣಗೆರೆಯಲ್ಲಿ ನಿನ್ನೆ ಪ್ರತಿಭಟನೆ ನಡೆಸಿದ್ದಾರೆ.
ಇಲ್ಲಿನ ವೈದ್ಯರಿಗೆ ಸರ್ಕಾರ ನೀಡಬೇಕಾದ ಶಿಷ್ಯ ವೇತನ ಬಿಡುಗಡೆ ಯಾಗಿಲ್ಲ. ಒಂದು ಕಡೆ ವೈದ್ಯಕೀಯ ಶಿಕ್ಷಣ ಇಲಾಖೆ ನೀಡಬೇಕು ಅಂತಾರೆ. ಮತ್ತೊಂದು ಕಡೆ ಕಾಲೇಜು ಆಡಳಿತ ಮಂಡಳಿ ನೀಡಬೇಕು ಎಂಬ ಮಾತು ಕೇಳಿ ಬರುತ್ತಿದೆ. ಇಬ್ಬರು ಸೇರಿ ಒಂದು ನಿರ್ಧಾರಕ್ಕೆ ಬಂದು ನಮಗೆ ಶಿಷ್ಯ ವೇತನ ನೀಡಿ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಇಲ್ಲಿ ಸೇರಿದ್ದವರ ಪೈಕಿ ಕೆಲವರು ಸ್ನಾತಕೋತ್ತರ ಹಾಗೂ ಸ್ನಾತಕ ವಿದ್ಯಾರ್ಥಿಗಳಿದ್ದಾರೆ. ಜೊತೆಗೆ ಅವರು ಮೆರಿಟ್ ಆಧಾರದ ಮೇಲೆ ಸಿಇಟಿಯಿಂದ ಮೆಡಿಕಲ್ ಸೀಟ್ ಪಡೆದು ಓದಿದವರು. ಎಂಬಿಬಿಎಸ್ ಮುಗಿದ ಬಳಿಕ ಜಿಲ್ಲಾ ಆಸ್ಪತ್ರೆಯಲ್ಲಿ ಹೌಸ್ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಇವರಿಗೆ ಸರ್ಕಾರದಿಂದ ಶಿಷ್ಯ ವೇತನ ನೀಡಲಾಗುತ್ತದೆ. ಆದ್ರೆ ಕಳೆದ ಐದು ವರ್ಷಗಳಿಂದ ಶಿಷ್ಯ ವೇತನ ನೀಡಿಲ್ಲ. ಕಾರಣ ಕೇಳಿದ್ರೆ ಉತ್ತರ ಸಹ ಸಿಗುತ್ತಿಲ್ಲ. ಹೀಗಾಗಿ ಮೆಣದಬತ್ತಿ ಹಿಡಿದು ಶಾಂತಿಯು ಹೋರಾಟಕ್ಕೆ ವೈದ್ಯರು ಮುಂದಾಗಿದ್ದಾರೆ. ಇದೇ ಹೋರಾಟ ತೀವ್ರ ಗೊಳಿಸಿ ದಾವಣಗೆರೆ ನಗರದ ಜಯದೇವ ಸರ್ಕಲ್ ನಲ್ಲಿ ಶಾಶ್ವತ ಹೋರಾಟಕ್ಕೆ ವೈದ್ಯರು ನಿರ್ಧರಿಸಿದ್ದು, ವಿಶೇಷವಾಗಿದೆ ಹಾಗೂ ಜಿಲ್ಲಾಡಳಿತಕ್ಕೆ ಆತಂಕಕ್ಕೆ ಕಾರಣವಾಗಿದೆ.