ದಾವಣಗೆರೆ:ಬೆಳ್ಳಂಬೆಳಗ್ಗೆ ಇಂಡಿಕಾ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಏಳು ಜನ ಸಾವನ್ನಪ್ಪಿರುವ ಘಟನೆ ಜಗಳೂರು ತಾಲೂಕಿನ ಕಾನನಕಟ್ಟೆ ಟೋಲ್ (NH 13) ಬಳಿ ಜರುಗಿದೆ.
ದಾವಣಗೆರೆಯಲ್ಲಿ ಸಂಕ್ರಾಂತಿಯಂದೇ ಭೀಕರ ರಸ್ತೆ ಅಪಘಾತ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ರಭಸವಾಗಿ ಬರುತ್ತಿದ್ದ ಕಾರು ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಏಳು ಜನ ಮೃತಪಟ್ಟಿದ್ದಾರೆ. ಕಾರಿನ ಚಾಲಕ ಮದ್ಯ ಸೇವಿಸಿ ನಿದ್ದೆಗೆ ಜಾರಿದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಎಸ್ಪಿ ಸಿಬಿ ರಿಷ್ಯಂತ್ ತಿಳಿಸಿದ್ದಾರೆ.
ಕಾರು ಡಿಕ್ಕಿಯಾದ ರಭಸಕ್ಕೆ ಸ್ಥಳದಲ್ಲೇ ಆರು ಜನ ಅಸುನೀಗಿದ್ದು, ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಮೃತರು ಮಲ್ಲಂಗೋವ(22), ಸಂತೋಷ್(21), ಸಂಜೀವ್(20), ಜೈಭೀಮ್(18), ರಾಘು(23), ಸಿದ್ದೇಶ್(20), ವೇದಮೂರ್ತಿ(18) ಎಂದು ಗುರುತಿಸಲಾಗಿದೆ.
ಓದಿ:ಪವಿತ್ರ ಗಂಗಾನದಿಯಲ್ಲಿ ಮಿಂದೇಳುತ್ತಿರುವ ಭಕ್ತರು: ಪೊಂಗಲ್ ಆಚರಿಸಿದ ಪುದುಚೇರಿ ಲೆಫ್ಟಿನೆಂಟ್ ಗವರ್ನರ್
ಮೃತರಲ್ಲಿ ನಾಲ್ವರು ಯಾದಗಿರಿಯ ಶಾಹಪುರ ತಾಲೂಕು ನಿವಾಸಿಗಳಾದರೆ, ಇನ್ನಿಬ್ಬರು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕು ನಿವಾಸಿಗಳು ಎಂದು ತಿಳಿದು ಬಂದಿದೆ. ಮತ್ತೊಬ್ಬ ವಿಜಯಪುರ ಜಿಲ್ಲೆಯ ತಾಳಿಕೋಟೆ ನಿವಾಸಿ ಎಂದು ಗುರುತಿಸಲಾಗಿದೆ.
ದಾವಣಗೆರೆಯಲ್ಲಿ ಭೀಕರ ರಸ್ತೆ ಅಪಘಾತ ಮೃತದೇಹಗಳನ್ನು ಜಗಳೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಕೆಎ 51 ಡಿ 5066 ನೊಂದಣಿಯ ಇಂಡಿಕಾ ಕಾರು ಬೆಂಗಳೂರಿನಿಂದ ಹೊಸಪೇಟೆ ಕಡೆ ಹೋಗುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಮಾಹಿತಿ ತಿಳಿದು ಘಟನಾಸ್ಥಳಕ್ಕೆ ದಾವಣಗೆರೆ ಎಸ್ಪಿ ಸಿಬಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ಕೈಗೊಂಡ ಬಳಿಕ ಅಪಘಾತದ ನಿಖರ ಮಾಹಿತಿ ನೀಡಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.