ದಾವಣಗೆರೆ: ಕೆಪಿಎಸ್ಸಿ ಪ್ರವೇಶ ಪರೀಕ್ಷೆಯಲ್ಲಿ ನಡೆದ ಅಕ್ರಮದ ಕುರಿತು ತನಿಖೆ ಮುಂದುವರೆಯುತ್ತಿದ್ದು, ಈ ಹಿಂದೆ ಪರೀಕ್ಷಾ ಅಕ್ರಮದ ಕಿಂಗ್ ಪಿನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕೆಎಎಸ್ ಅಧಿಕಾರಿಯೊಬ್ಬರನ್ನು ಬಂಧಿಸಿದ್ದ ದಾವಣಗೆರೆ ಪೊಲೀಸರು, ಇದೀಗ ಮತ್ತೆ ಮೂವರನ್ನ ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು ಜಲ ಮಂಡಳಿಯ ಸಹಾಯಕ-ಸಾಗರ್ ಕರ್ಕಿ, ಕಲಬುರಗಿ ರೇಷ್ಮೆ ಪದವಿ ಕಾಲೇಜಿನ ಪ್ರಾಚಾರ್ಯ ಶ್ರೀ ಶೈಲ್ ಹಳ್ಳಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರ ಹಾವೇರಿ ಮೂಲದ ಮಾರುತಿ ಬಂಧಿತ ಆರೋಪಿಗಳು. ಈ ಹಿಂದೆ 11 ಜನ ಮತ್ತು ಈಗ ಮೂವರು ಸೇರಿ ಈ ಪ್ರಕರಣದಲ್ಲಿ ಒಟ್ಟು 14 ಆರೋಪಿಗಳ ಬಂಧನವಾದಂತಾಗಿದೆ. ಈ ಅಕ್ರಮದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಮಾಹಿತಿ ಇದ್ದು, ಬಂಧಿತರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ದಾವಣಗೆರೆ ಅಪರಾಧ ವಿಭಾಗದ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದು, ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಪ್ರಕರಣದ ಹಿನ್ನೆಲೆ:
2017ರ ಅಕ್ಟೋಬರ್ನಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ದೈಹಿಕ ಶಿಕ್ಷಕರ ನೇಮಕಾತಿಗಾಗಿ ಕೆಪಿಎಸ್ಸಿ ಪರೀಕ್ಷೆ ನಡೆಸಿತ್ತು. ಆಗ ದಾವಣಗೆರೆಯ ನೂತನ ಕಾಲೇಜಿನಲ್ಲಿ ನಡೆದ ಪರೀಕ್ಷೆ ವೇಳೆ ಮೂವರು ಪರೀಕ್ಷಾರ್ಥಿಗಳು ಮೈಕ್ರೋ ಫೋನ್ಗಳನ್ನು ಬಳಸಿ ಪರೀಕ್ಷೆ ಬರೆಯುತ್ತಿದ್ದರು ಎಂದು ತಿಳಿದು ಬಂದಿತ್ತು. ಈ ವೇಳೆ ಪರೀಕ್ಷಾ ಮೇಲ್ವಿಚಾರಕರ ಕೈಗೆ ರೆಡ್ ಹ್ಯಾಂಡ್ ಆಗಿ ದಾವಣಗೆರೆ ತಾಲೂಕಿನ ಸುಭಾಷ್, ಶ್ರೀನಿವಾಸ್ ಹಾಗೂ ತಿಪ್ಪೇಶ್ ಎಂಬುವವರು ಸಿಕ್ಕಿಬಿದ್ದಿದ್ದರು.
ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಕಿಂಗ್ ಪಿನ್ ಆಗಿದ್ದ ರಾಮಚಂದ್ರಯ್ಯನನ್ನು 2018ರ ಜೂನ್ನಲ್ಲಿ ದಾವಣಗೆರೆ ಪೊಲೀಸರು ಬಂಧಿಸಿದ್ದರು. ರಾಮಚಂದ್ರಯ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪ ಕಾರ್ಯದರ್ಶಿಯಾಗಿದ್ದು, ಈತನನ್ನು 420 ಕೇಸ್ನಲ್ಲಿ ಬೆಂಗಳೂರಿನ ಉಪ್ಪಾರ ಪೇಟೆ ಪೊಲೀಸರು ಬಂಧಿಸಿದ್ದರು.
ಒಟ್ಟಿನಲ್ಲಿ 2017ರಲ್ಲಿ ಕೆಪಿಎಸ್ಸಿ ಪರೀಕ್ಷಾ ವೇಳೆ ನಡೆದ ಅಕ್ರಮ ಸಾಕಷ್ಟು ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಇನ್ನೂ ಹಲವು ಮಂದಿ ಈ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ. ಹೀಗಾಗಿ, ಪ್ರಕರಣದ ಬೆನ್ನು ಹತ್ತಿರುವ ಪೊಲೀಸರು ಆರೋಪಿಗಳ ಹುಡುಕಾಟ ನಡೆಸುತ್ತಿದ್ದಾರೆ.