ದಾವಣಗೆರೆ: ಕೋವಿಡ್ ಉಲ್ಭಣಗೊಂಡಿದ್ದ ವೇಳೆ ಆರೋಗ್ಯ ಇಲಾಖೆ ಸಿಬ್ಬಂದಿ ಸೇವೆ ಮರೆಯುವಂತಿಲ್ಲ. ಸಾವಿರಾರು ರೋಗಿಗಳನ್ನು ಗುಣಪಡಿಸಿ ಧೈರ್ಯ ತುಂಬಿ ಕಳುಹಿಸಿದ್ದ ಕೊರೊನಾ ವಾರಿಯರ್ಸ್ ಪರಿಸ್ಥಿತಿ ಈಗ ಹೇಳ ತೀರದಂತಾಗಿದೆ. ಹೌದು, ಜಿಲ್ಲಾ ಆರೋಗ್ಯ ಇಲಾಖೆ ಇದೇ ಮಾರ್ಚ್ 30ರಂದು ಸುಮಾರು 180 ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ಕೈ ಬಿಡುವುದಾಗಿ ಆದೇಶ ಹೊರಡಿಸಿದೆ. ಇದರಿಂದಾಗಿ 180 ಸಿಬ್ಬಂದಿಗಳ ಬದುಕು ಅತಂತ್ರವಾಗಿದೆ.
ಕೊರೊನಾ ವಿರುದ್ಧದ ಹೋರಾಟದಲ್ಲಿ ಟೊಂಕ ಕಟ್ಟಿ ನಿಂತಿದ್ದ ಕೆಲ ಕೊರೊನಾ ವಾರಿಯರ್ಸ್‌ಗಳನ್ನು ಜಿಲ್ಲಾ ಆರೋಗ್ಯ ಇಲಾಖೆ ಕೆಲಸದಿಂದ ಕೈ ಬಿಡುವ ನಿರ್ಧಾರ ಕೈಗೊಂಡಿದೆ. ದಾವಣಗೆರೆಯ ಜಿಲ್ಲಾ ಆರೋಗ್ಯ ಇಲಾಖೆ ಅಧೀನದಲ್ಲಿ ಕೋವಿಡ್ ಸಂದರ್ಭದಲ್ಲಿ ಸೇವೆ ಸಲ್ಲಿಸಿದ್ದ ಆರೋಗ್ಯ ಸಿಬ್ಬಂದಿಗಳು ಈಗ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಕೋವಿಡ್ ಉಲ್ಭಣಗೊಂಡ ವೇಳೆ ರಾಜ್ಯದ ಎಲ್ಲ ಕಡೆಗಳಲ್ಲೂ ಆರೋಗ್ಯ ಇಲಾಖೆ ಸಿಬ್ಬಂದಿ ಕೊರತೆ ಇದ್ದ ಕಾರಣ ಐದು ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ಆರೋಗ್ಯ ಇಲಾಖೆ ನೇಮಕ ಮಾಡಿಕೊಂಡಿತ್ತು, ಅದರಲ್ಲಿ ಕೆಲವರನ್ನು ಮುಂದುವರೆಸುವುದಾಗಿ ಕೂಡ ಹೇಳಲಾಗಿತ್ತು. ಇದೀಗ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖ ಕಂಡಿದ್ದರಿಂದ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡಿದ್ದ ನೌಕರರನ್ನು ಕೆಲಸದಿಂದ ತೆಗೆಯಲು ಚಿಂತಿಸಲಾಗಿದೆ.