ಬೆಂಗಳೂರು: ವಿಧಾನಸಭೆಯಲ್ಲಿ ಕಡಿಮೆ ಶಾಸಕರ ಸಂಖ್ಯೆಯಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಬೆಂಬಲ ಪಡೆದು ಮುಖ್ಯಮಂತ್ರಿ ಪದವಿ ಗಿಟ್ಟಿಸಿಕೊಂಡು ರಾಜ್ಯಭಾರ ನಡೆಸಿದ ಜೆಡಿಎಸ್ ಈಗ ರಾಜ್ಯಸಭೆ ಚುನಾವಣೆಯಲ್ಲಿಯೂ ಇಂತಹದೇ ತಂತ್ರಗಾರಿಕೆ ಹೆಣೆದು ಪಕ್ಷದಿಂದ ಅಭ್ಯರ್ಥಿ ನಿಲ್ಲಿಸಿ ಗೆಲ್ಲಿಸಿಕೊಳ್ಳುವ ಸ್ಟ್ರಾಟಜಿ ರೂಪಿಸಿದೆ.
ರಾಜ್ಯ ವಿಧಾನಸಭೆಯಿಂದ 04 ಸ್ಥಾನಗಳಿಗೆ ನಡೆಯುವ ರಾಜ್ಯಸಭೆ ಚುನಾವಣೆಯಲ್ಲಿ ಒಂದು ಸೀಟನ್ನು ಸಹ ಗೆಲ್ಲಲು ಜೆಡಿಎಸ್ಗೆ ಸಾಧ್ಯವಿಲ್ಲವೆನ್ನುವ ಪರಿಸ್ಥಿತಿಯಿದೆ. ಗೆಲುವಿಗೆ ಮತಗಳ ಕೊರತೆ ಇದ್ದರೂ ಅಭ್ಯರ್ಥಿ ಕಣಕ್ಕಿಳಿಸಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ(32ಮತ), ಕಾಂಗ್ರೆಸ್(25ಮತ)ನ ಹೆಚ್ಚುವರಿ ಮತಗಳನ್ನು ಕಬಳಿಸಿ ರಾಜ್ಯಸಭೆಗೆ ತನ್ನದೇ ಅಭ್ಯರ್ಥಿ ಆಯ್ಕೆಮಾಡಿಕೊಳ್ಳುವ ಇರಾದೆಯನ್ನು ಜೆಡಿಎಸ್ ಹೊಂದಿದೆ.
ರಾಜ್ಯಸಭೆ ಚುನಾವಣೆಯಲ್ಲಿ ಒಂದು ಸ್ಥಾನ ಗೆಲ್ಲಲು ಕನಿಷ್ಠ 45 ಮತಗಳ ಅಗತ್ಯವಿದೆ. ವಿಧಾನಸಭೆಯಲ್ಲಿ ಕೇವಲ 32 ಶಾಸಕರ ಬೆಂಬಲ ಇರುವ ಜೆಡಿಎಸ್ ಗೆಲುವಿಗೆ 13 ಮತಗಳ ಕೊರತೆಯಿರುವುದರಿಂದ ರಾಜ್ಯಸಭೆ ಚುನಾವಣೆ ಗೋಜಿಗೆ ಹೋಗುವುದಿಲ್ಲ ಎಂದೇ ರಾಜಕೀಯವಾಗಿ ವಿಶ್ಲೇಷಿಸಲಾಗಿತ್ತು.
ಜೆಡಿಎಸ್ ಮತಗಳ ಬೆಂಬಲದಿಂದ ನಾಲ್ಕನೇ ಅಭ್ಯರ್ಥಿ ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ಲೆಕ್ಕಾಚಾರ ಹಾಕುತ್ತಿರುವಾಗಲೇ ಕುಮಾರಸ್ವಾಮಿ ಅವರು ಜೆಡಿಎಸ್ ತನ್ನ ಅಭ್ಯರ್ಥಿಯನ್ನು ರಾಜ್ಯಸಭೆ ಚುನಾವಣೆಯಲ್ಲಿ ನಿಲ್ಲಿಸಲಿದೆ ಎನ್ನುವ ನಿರ್ಧಾರ ಪ್ರಕಟಿಸುವ ಮೂಲಕ ಸಂಸತ್ತಿನ ಚುನಾವಣೆಯನ್ನು ಕುತೂಹಲಕಾರಿಯಾಗಿಸಿದ್ದಾರೆ.