ದಾವಣಗೆರೆ: ಮದ್ಯಪಾನ ಮಾಡಬೇಡಿ ಎಂದು ಬುದ್ಧಿವಾದ ಹೇಳಿದ ಪತ್ನಿಯನ್ನೇ ಪತಿ ಕತ್ತು ಹಿಸುಕಿ ಕೊಂದಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದಲ್ಲಿ ಜರುಗಿದೆ.
40 ವರ್ಷದ ಶಿಲ್ಪ ಪತಿಯಿಂದ ಕೊಲೆಯಾದ ದುರ್ದೈವಿ. ಗಿರೀಶ್ ಆರೋಪಿ. ಸರಟೂರು ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಗಿರೀಶ್ ಹಾಗೂ ಶಿಲ್ಪಾ ದಂಪತಿ ವಾಸವಿದ್ದರು. ಪ್ರತಿನಿತ್ಯ ಆರೋಪಿ ಕುಡಿದು ಮನೆಗೆ ಬರುತ್ತಿದ್ದನಂತೆ. ಕುಡಿಯಬೇಡಿ ಎಂದು ಹೇಳಿದ್ದಕ್ಕೆ ಆಕೆಯನ್ನು ಕೊಲೆ ಮಾಡಿರುವ ಗಿರೀಶ್ ತಲೆಮರೆಸಿಕೊಂಡಿದ್ದ. ಈ ಕುರಿತು ತನಿಖೆ ನಡೆಸಿದ ಹೊನ್ನಾಳಿ ಸಿಪಿಐ ದೇವರಾಜ್ ನೇತೃತ್ವದ ತಂಡ ಕೇವಲ 8 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಜಗಳಕ್ಕೆ ಕಾರಣ
ಕುಡಿದು ಬಂದ ಪತಿ ಗಿರೀಶ್, ಊಟ ನೀಡುವಂತೆ ಪತ್ನಿ ಶಿಲ್ಪಾಳ ಬಳಿ ಕ್ಯಾತೆ ತೆಗೆದು ಜಗಳ ಮಾಡಿದ್ದಾನೆ. ಈ ವೇಳೆ ಊಟ ನೀಡದ ಶಿಲ್ಪಾ ಮದ್ಯಪಾನ ಮಾಡ್ಬೇಡ ಎಂದು ಬುದ್ಧಿವಾದ ಹೇಳಿದ್ದಾಳೆ. ನಶೆಯಲ್ಲಿದ್ದ ಗಿರೀಶ್ ಪತ್ನಿಗೆ ಹೊಡೆದು, ಕುತ್ತಿಗೆಗೆ ನೇಣು ಬಿಗಿಯಲು ಮುಂದಾಗಿದ್ದಾನೆ. ಶಿಲ್ಪಾ ಕಾಲಿನಿಂದ ಒದ್ದಿದ್ದು, ಗಿರೀಶ್‌ಗೆ ಗಾಯಗಳಾಗಿದೆ. ಗಾಯಗೊಂಡರೂ ಬಿಡದ ಆತ ನಂತರ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಆರೋಪಿ ಪತಿ ಗಿರೀಶ್ ಪತ್ನಿಯನ್ನು ಕೊಲೆಗೈದು ತಲೆ ಮರೆಸಿಕೊಂಡಿದ್ದ. ದಂಪತಿಯ ಜಗಳದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಿರೀಶ್ ಕೊಲೆ ಮಾಡಿ ಮನೆಯಿಂದ ಕಾಲ್ಕಿತ್ತು ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾನೆ. ಜನರಿಂದ ಮಾಹಿತಿ ಪಡೆದ ಹೊನ್ನಾಳಿ ಪೋಲಿಸರು ಆಸ್ಪತ್ರೆಗೆ ಬಂಧಿಸಲು ಧಾವಿಸುವಷ್ಟರಲ್ಲಿ ಆತ ಕಾಲ್ಕಿತ್ತಿದ್ದಾನೆ.
ಆರೋಪಿಯ ಜಾಡು ಹಿಡಿದು ಹೋದ ಪೊಲೀಸರು ಕೊನೆಗೂ ಶಿಕಾರಿಪುರ ರಸ್ತೆಯಲ್ಲಿ ಓಡಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:ರಾತ್ರಿ ವೇಳೆ ಎಚ್ಚರಿಕೆಯಿಂದ ವಾಹನ ಚಲಾಯಿಸಿ, ಸುರಕ್ಷತೆಗೆ ಆದ್ಯತೆ ನೀಡಿ: ಸಿಎಂ ಸಲಹೆ