ಹರಿಹರ : ಭೇಟಿ ಬಚಾವೋ ಎಂದು ಮನೆಯ ಮಗಳನ್ನು ಮಾತ್ರ ನೋಡಿದರೆ ಸಾಲದು ಮನೆಗೆ ಬಂದ ಸೊಸೆಯನ್ನು ಸಹ ಚೆನ್ನಾಗಿ ನೋಡಿಕೊಳ್ಳಬೇಕು, ಆಗ ಮಾತ್ರ ಒಬ್ಬ ಮಹಿಳೆ ಮತ್ತೊಬ್ಬ ಮಹಿಳೆಯನ್ನು ಗೌರವಿಸಿದಂತಾಗುತ್ತದೆ ಎಂದು ಹರಿಹರದ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಸಂಚಾಲಕಿ ಸಹೋದರಿ ಬಿ. ಕೆ. ಶಿವದೇವಿ ಹೇಳಿದರು.
ನಗರದ ಎಸ್.ಎಸ್.ಕೆ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ತಾಲೂಕು ಮಟ್ಟದ ಜ್ಞಾನವಿಕಾಸ ಕೇಂದ್ರಗಳ ಮಹಿಳಾ ಸಮಾವೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮದುವೆಯಾಗಿ ಬಂದ ಹೆಣ್ಣು ಅತ್ತೆ ಮಾವ ಹಾಗೂ ಇತರರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಮಹಿಳೆಯರಿಗೆ ಕಿವಿ ಮಾತು ಹೇಳಿದರು.
ಆಧುನಿಕ ತಂತ್ರಜ್ಞಾನದಿಂದ ಭ್ರೂಣ ಲಿಂಗ ಗುರುತಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಇದರ ಪರಿಣಾಮವಾಗಿ ಹೆಣ್ಣು ಭ್ರೂಣ ಹತ್ಯೆಗಳ ಪ್ರಮಾಣ ಹೆಚ್ಚಾಗುತ್ತಿದೆ ಇದು ದೇಶಕ್ಕೆ ಮಾರಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹಿಂದೆ ಮಹಿಳೆಯರು ಧರಿಸುವ ಬಟ್ಟೆಗಳು ಹರಿದರೆ ಹೊಲೆದುಕೊಂಡು ಧರಿಸುತ್ತಿದ್ದರು. ಆದರೆ ಇಂದಿನ ಆಧುನಿಕ ಯುಗದಲ್ಲಿ ಒಳ್ಳೆಯ ಬಟ್ಟೆಗಳನ್ನು ಹರಿದ ಶೈಲಿಯಲ್ಲಿ ಧರಿಸಲಾಗುತ್ತಿದೆ ಇದು ತಪ್ಪು. ಮೈ ಕಾಣಿಸುವಂತಹ ಬಟ್ಟೆಗಳನ್ನು ಮಹಿಳೆಯರು ಧರಿಸಬಾರದು ಇದರಿಂದ ಅನಾಹುತಗಳೇ ಹೆಚ್ಚು ಎಂದು ಅಭಿಪ್ರಾಯ ತಿಳಿಸಿದರು.
ಮನೆಯಲ್ಲಿ ಗಂಡು ಮಗ ಓದುತ್ತಿದ್ದರೆ ಅವನು ಡಾಕ್ಟರ್, ಎಂಜಿನಿಯರ್ ಆಗಲಿ ಎಂದು ಕನಸು ಕಾಣುತ್ತಾರೆ. ಅದೇ ಮಗಳು ಆದರೆ ಯಾವುದೋ ಒಂದು ಓದಿಸಿ ಮದುವೆ ಮಾಡಿ ಕಳಿಸಿದರಾಯಿತು ಎಂದು ಸುಮ್ಮನಾಗುತ್ತಾರೆ. ಇದು ಆಗಬಾರದು ಮಗನೇ ಆಗಲಿ ಮಗಳೇ ಆಗಲಿ ಅವರ ಆಸೆಯಂತೆ ಓದಿ ಮುಂದೆ ಬರುವಂತೆ ಪೋಷಕರು ಪ್ರೋತ್ಸಾಹಿ ಸಬೇಕು ಎಂದು ಸಲಹೆ ನೀಡಿದರು.