ಬೆಂಗಳೂರು:ಸರ್ಕಾರಿ ನೌಕರರ ಮೇಲಿನ ದುರ್ನಡತೆಗೆ ಸಂಬಂಧಿಸಿದಂತೆ ಶಿಸ್ತಿನ ಕ್ರಮ ಕೈಗೊಳ್ಳಲು ಗರಿಷ್ಠ ಕಾಲಮಿತಿ ನಿಗದಿಪಡಿಸಿ ಸರ್ಕಾರ ಆದೇಶಿಸಿದೆ. ಸರ್ಕಾರಿ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸುವಲ್ಲಿ ಆಗುವ ವಿಳಂಬವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಸುತ್ತೋಲೆ ಹೊರಡಿಸಲಾಗಿದೆ.
ಸರ್ಕಾರಿ ನೌಕರರ ಮೇಲೆ ಶಿಸ್ತು ಕ್ರಮ ಜರುಗಿಸಲು ಕಾಲಮಿತಿ ನಿಗದಿಪಡಿಸಿದ ಸರ್ಕಾರ! - ಕರ್ನಾಟಕ ಸರ್ಕಾರಿ ನೌಕರರ ಮೇಲೆ ಕ್ರಮ
ಸರ್ಕಾರಿ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸುವಲ್ಲಿ ಆಗುವ ವಿಳಂಬವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಸುತ್ತೋಲೆ ಹೊರಡಿಸಲಾಗಿದೆ.

ಅದರಂತೆ ಸರ್ಕಾರಿ ನೌಕರರ ಅಕ್ರಮಗಳು, ದುರ್ನಡತೆಗಳು ಶಿಸ್ತಿನ ಪ್ರಾಧಿಕಾರದ ಗಮನಕ್ಕೆ ಬಂದ ದಿನಾಂಕದಿಂದ ದೋಷಾರೋಪಣಾ ಪಟ್ಟಿಯನ್ನು ತಯಾರಿಸುವ ಸಲುವಾಗಿ ದಾಖಲೆಗಳನ್ನು ಪಡೆಯಲು ಅಥವಾ ಪ್ರಾರಂಭಿಕ ಶಾಖೆ, ವಿಚಾರಣೆಯನ್ನು ಅಂತಿಮಗೊಳಿಸಲು ಹಾಗೂ ದೋಷಾರೋಪಣಾ ಪಟ್ಟಿಯನ್ನು ತಯಾರಿಸಿ ಜಾರಿಗೊಳಿಸಲು 1 ತಿಂಗಳ ಕಾಲಮಿತಿ ನಿಗದಿಪಡಿಸಲಾಗಿದೆ.
ಇನ್ನು ದೋಷಾರೋಪಣಾ ಪಟ್ಟಿಗೆ ಸರ್ಕಾರಿ ನೌಕರನ ವಿವರಣೆಯನ್ನು ಪಡೆಯಲು ಹಾಗೂ ಸರ್ಕಾರಿ ವಿಚಾರಣಾ ಅಧಿಕಾರಿ ಮತ್ತು ಮಂಡನಾಧಿಕಾರಿಯನ್ನು ನೇಮಿಸಲು ಒಂದು ತಿಂಗಳ ಕಾಲಮಿತಿ ನಿಗದಿ ಪಡಿಸಲಾಗಿದೆ.
ವಿಚಾರಣೆಯನ್ನು ನಡೆಸಲು ಹಾಗು ವಿಚಾರಣಾ ವರದಿಯನ್ನು ಮಂಡಿಸಲು 4 ತಿಂಗಳ ಕಾಲಮಿತಿ ನಿಗದಿಪಡಿಸಲಾಗಿದೆ. ವಿಚಾರಣಾ ವರದಿಯನ್ನು ಪರಿಶೀಲಿಸಲು ಹಾಗೂ ಅದನ್ನು ಸ್ವೀಕರಿಸುವ ಬಗ್ಗೆ ನಿರ್ಣಯಿಸಲು 1 ತಿಂಗಳ ಕಾಲಮಿತಿ ನಿಗದಿಪಡಿಸಲಾಗಿದೆ.
ಇನ್ನು ಕಾರಣ ಕೇಳುವ 2ನೇ ಸೂಚನಾ ಪತ್ರವನ್ನು ವಿಚಾರಣಾ ವರದಿಯ ಜೊತೆಗೆ ಆಪಾದಿತ ಸರ್ಕಾರಿ ನೌಕರನಿಗೆ ನೀಡಲು ಒಂದು ತಿಂಗಳನ್ನು ನಿಗದಿಪಡಿಸಲಾಗಿದೆ. ಅಂತಿಮ ಆದೇಶವನ್ನು ಹೊರಡಿಸಲು ಒಂದು ತಿಂಗಳ ಕಾಲಮಿತಿ ವಿಧಿಸಲಾಗಿದೆ.
ಹೀಗೆ ಸರ್ಕಾರಿ ನೌಕರನ ಮೇಲಿನ ಆಪಾದಿತ ದುರ್ನಡತೆಗೆ ಶಿಸ್ತಿನ ಕ್ರಮ ಜರುಗಿಸಲು ಒಟ್ಟು 9 ತಿಂಗಳ ಕಾಲಮಿತಿಯನ್ನು ನಿಗದಿಪಡಿಸಲಾಗಿದ್ದು, ಸರ್ಕಾರದ ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರು ಈ ಸೂಚನೆಗಳನ್ನು ಚಾಚೂ ತಪ್ಪದೆ ಕಡ್ಡಾಯವಾಗಿ ಪಾಲಿಸಬೇಕು. ಇದನ್ನು ಸಂಬಂಧಪಟ್ಟ ಎಲ್ಲಾ ಶಿಸ್ತು ಪ್ರಾಧಿಕಾರಗಳ ಗಮನಕ್ಕೆ ಪಾಲನೆಗಾಗಿ ತರಬೇಕಾಗಿ ತಿಳಿಸಲಾಗಿದೆ. ಈ ಸೂಚನೆಗಳನ್ನು ಉಲ್ಲಂಘಿಸುವ ಅಧಿಕಾರಿಗಳು ತಾವೇ ಕರ್ತವ್ಯಲೋಪದ ಆಧಾರದ ಮೇಲೆ ಶಿಸ್ತಿನ ಕ್ರಮಕ್ಕೆ ಒಳಪಡಬೇಕಾಗುತ್ತದೆ ಎಂದು ತಿಳಿಸಲಾಗಿದೆ. ನಿಯಮದಂತೆ ಸರ್ಕಾರಿ ನೌಕರರ ವಿರುದ್ಧ ಕೈಗೊಳ್ಳಬಹುದಾದ ಶಿಸ್ತು ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ.
ನಿಯಮ 12ರಡಿ ಶಿಸ್ತು ಕ್ರಮವಹಿಸಲು ಕಾಲಮಿತಿ ನಿಗದಿಪಡಿಸಲಾಗಿದೆ. ಅದರಂತೆ ಆಪಾದಿತ ಸಮಜಾಯಿಷಿ ನೀಡಲು ನಿಯಮ 12ರ ಅಡಿ ನೋಟೀಸ್ ಸ್ವೀಕರಿಸಿದಾಗಿನಿಂದ ಗರಿಷ್ಠ 15 ದಿನಗಳ ಅವಧಿಯಲ್ಲಿ ಸ್ವೀಕೃತಗೊಳ್ಳದಿದ್ದಲ್ಲಿ ಯಾವುದೇ ಸಮಜಾಯಿಷಿ ಇರುವುದಿಲ್ಲವೆಂದು ಪರಿಭಾವಿಸಿ ಶಿಸ್ತು ಪ್ರಾಧಿಕಾರಿ ಮುಂದಿನ ಪ್ರಕ್ರಿಯೆ ಪ್ರಾರಂಭಿಸಬೇಕು. ಶಿಸ್ತು ಪ್ರಾಧಿಕಾರಿ ನಿರ್ಣಯ ಕೈಗೊಂಡು ಆದೇಶ ಹೊರಡಿಸಲು ಆಪಾದಿತ ನೌಕರನ ಸಮಜಾಯಿಷಿ ಸ್ವೀಕಾರಗೊಂಡಾಗಿನಿಂದ ಗರಿಷ್ಠ 1 ತಿಂಗಳ ಕಾಲಮಿತಿ ನಿಗದಿಪಡಿಸಲಾಗಿದೆ.