ದಾವಣಗೆರೆ:ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರಲ್ಲಿ ಮಹಾತ್ಮ ಗಾಂಧಿ ಪ್ರಮುಖರು. ಸ್ವಾತಂತ್ರ್ಯ ಪೂರ್ವದಲ್ಲಿ ದಾವಣಗೆರೆಗೆ ಭೇಟಿ ನೀಡಿದ್ದ ಅವರು ಹರಿಜನ ಗಿರಿಜನರಿಗೆ ಶಿಕ್ಷಣ ಕೊಡಿಸಬೇಕೆನ್ನುವ ಮಹದಾಸೆಯಿಂದ 1934 ರಲ್ಲಿ ಆದಿ ಕರ್ನಾಟಕ ವಿದ್ಯಾರ್ಥಿ ನಿಲಯಕ್ಕೆ ಅಡಿಪಾಯ ಹಾಕಿ, ಹರಿಜನರೊಂದಿಗೆ ಸಂವಾದ ನಡೆಸಿದ್ದರು. ಗಾಂಧೀಜಿ ಆಸೆಯಿಂದ ನಿರ್ಮಾಣವಾದ ಶಾಲೆ ಹಾಗು ವಿದ್ಯಾರ್ಥಿ ನಿಲಯದಲ್ಲಿ ಸಾಕಷ್ಟು ಮಕ್ಕಳು ವಿದ್ಯಾಭ್ಯಾಸ ನಡೆಸಿ, ಇಂದು ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಬೆಣ್ಣೆ ನಗರಿಗೆ ಮೊಟ್ಟ ಮೊದಲಿಗೆ 1934ರಲ್ಲಿ ಭೇಟಿ ನೀಡಿದ್ದ ಗಾಂಧಿ, ಹರಿ ಜನ ಕಾಲೋನಿ (ಇಂದಿನ ಗಾಂಧಿ ನಗರ) ಗೆ ತೆರಳಿ ಅವರೊಂದಿಗೆ ಸಂವಾದ ನಡೆಸಿ ಸ್ವಾತಂತ್ರ್ಯದ ಕಿಚ್ಚು ಹಬ್ಬಿಸಿದ್ದರು. ಸಂವಾದದ ಬಳಿಕ ಹರಿ ಜನರು, ಬಡವರ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆನ್ನುವ ಮಹಾತ್ಮ ಗಾಂಧಿ ಅವರ ಮಹದಾಸೆಗೆ ಅನುಗುಣವಾಗಿ ವಿದ್ಯಾರ್ಥಿ ನಿಲಯಕ್ಕೆ ಅಡಿಪಾಯ ಹಾಕಿದರು. ದಾವಣಗೆರೆಯ ಜಿಲ್ಲಾ ಕೇಂದ್ರವಾಗಿದ್ದ ಚಿತ್ರದುರ್ಗಕ್ಕೆ ಸ್ವಾತಂತ್ರ್ಯ ಹೋರಾಟ ಚಳವಳಿಯಲ್ಲಿ ಪಾಲ್ಗೊಳ್ಳಲು ಹಾಗು ಜನರನ್ನ ಜಾಗೃತಗೊಳಸಲು ದೇಶಾದ್ಯಂತ ಪ್ರವಾಸ ಕೈಗೊಂಡ ವೇಳೆ ಇಲ್ಲಿಗೆ ಆಗಮಿಸಿದ್ದರು.
ಮಕ್ಕಳ ಶಿಕ್ಷಣದ ಕುರಿತು ಚರ್ಚಿಸಿದ್ದ ಗಾಂಧೀಜಿ: ಶಿಕ್ಷಣದ ಬಗ್ಗೆ ಚರ್ಚಿಸಲು ಹರಿಜನ ಮುಖಂಡರೊಂದಿಗೆ ಸಭೆ ನಡೆಸಿದ್ದರಿಂದ ಅಂದಿನ ಎ ಕೆ ಕಾಲೋನಿಯನ್ನು ಗಾಂಧಿ ನಗರ ಎಂದು ನಾಮಕರಣ ಮಾಡಲಾಯಿತು. ಅಂದೇ ದಾವಣಗೆರೆಯಾದಂತ್ಯ ಸಂಚರಿಸಿದ ಬಾಪು, ಪಿ.ಜೆ.ಬಡಾವಣೆಯಲ್ಲಿ ಜಾಗ ಗುರುತಿಸಿ ತರಾತುರಿಯಲ್ಲಿ ಮಹಾರಾಷ್ಟ್ರಕ್ಕೆ ತೆರಳಬೇಕಾಗಿದ್ದರೂ ಕೂಡ 1934 ರ ಮಾರ್ಚ್ 02 ರ ರಾತ್ರಿ 8 ಗಂಟೆಗೆ ಶಂಕುಸ್ಥಾಪನೆ ನೆರವೇರಿಸಿಯೇ ವಾಪಸ್ ತೆರಳಿದ್ದರು. ಅದಷ್ಟು ಬೇಗ ಈ ಶಾಲೆ ಹಾಗು ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಿ ಕೊಡುವಂತೆ ಮೈಸೂರು ಸಂಸ್ಥಾನಕ್ಕೆ ಒತ್ತಾಯಿಸಿದ್ದರು. ಅವರ ಒತ್ತಾಯದ ಮೇರೆಗೆ ಮೈಸೂರು ಸಂಸ್ಥಾನದ ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ ಅವರು ಇಡೀ ಕಟ್ಟಡವನ್ನು 1937 ರಲ್ಲಿ ನಿರ್ಮಾಣ ಮಾಡಿದ್ರು. ಅಂದಿನಿಂದ ಇಂದಿನವರೆಗೂ ಸಾವಿರಾರು ಬಡ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.