ದಾವಣಗೆರೆ: ಮುಖ್ಯಮಂತ್ರಿ ಕುರ್ಚಿಯಿಂದ ತೆಗೆದು ಹಾಕಿದ್ದಕ್ಕೆ ಬಿಎಸ್‌ವೈ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಮಾಜಿ ಸಿಎಂ ಯಡಿಯೂರಪ್ಪಗೆ ಟಾಂಗ್ ನೀಡಿದರು. 150 ಸ್ಥಾನ ಗೆಲ್ಲುವ ತನಕ ನಾನು ವಿಶ್ರಮಿಸುವುದಿಲ್ಲ ಎಂಬ ಯಡಿಯೂರಪ್ಪ ಹೇಳಿಕೆಗೆ ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅವರು ಬಿಎಸ್‌ವೈ ವಿರುದ್ಧ ವ್ಯಂಗ್ಯವಾಡಿದರು.
ಮಾಜಿ ಸಿಎಂ ಬಿಎಸ್‌ವೈ ವಿರುದ್ಧ ವಿಪಕ್ಷ ನಾಯಕ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿರುವುದು.. ನಗರದಲ್ಲಿ ಬಿಜೆಪಿ ವಿರುದ್ಧ ಮಾತು ಮುಂದುವರಿಸಿದ ಸಿದ್ದರಾಮಯ್ಯ, ಅವಧಿಗೂ ಮುನ್ನ ವಿಧಾನಸಭೆ ಚುನಾವಣೆ ನಡೆಯುವುದಿಲ್ಲ. ಯುಪಿ ಮಾದರಿಯಲ್ಲಿ ಬುಲ್ಡೋಜರ್ ಅಮಾಯಕರ ಮೇಲೆ ಹರಿಸುವ ಬದಲು ಶ್ರೀರಾಮಸೇನೆ ಮೇಲೆ ಹರಿಸಬೇಕೆಂದು ವಾಗ್ದಾಳಿ ನಡೆಸಿದರು.
ಹುಬ್ಬಳಿ ಗಲಭೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹುಬ್ಬಳಿ ಗಲಭೆಯ ರೂವಾರಿ ಅಭಿಷೇಕ ಹಿರೇಮಠ ವಿವಾದಾತ್ಮಕ ಪೋಸ್ಟ್ ಮಾಡಿದ್ದಾನೆ. ಇದರ ಹಿಂದೆ ಇರುವವರು ಬಿಜೆಪಿಯವರು. ಅವರೇ ಪೋಸ್ಟ್ ಮಾಡಿಸಿದ್ದಾರೆ. ಕಾನೂನು ಯಾರೇ ಕೈಗೆ ತೆಗೆದುಕೊಂಡ್ರೂ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು. ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಬೇಕು. ಅದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಓದಿ:ಆರಗ ಜ್ಞಾನೇಂದ್ರ ಬೇಜವಾಬ್ದಾರಿ ಸಚಿವ: ಸಿದ್ದರಾಮಯ್ಯ
ಕುಮಾರಸ್ವಾಮಿ ಬಿಜೆಪಿಯ ಬಿ ಟೀಂ :ಕಾಂಗ್ರೆಸ್ ಪಕ್ಷದವರು ತಮ್ಮ ಕೇಸ್ ಮುಚ್ಚಿ ಹಾಕಿಕೊಳ್ಳಲು ಲೋಕಯುಕ್ತವನ್ನು ಮುಚ್ಚಿದ್ರು ಎಂಬ ಹೆಚ್‌ಡಿಕೆ ಹೇಳಿಕೆಗೆ ಪ್ರತಿಯಿಸಿದ ಅವರು, ನಾನು ಕುಮಾರಸ್ವಾಮಿ ಬಗ್ಗೆ ಮಾತನಾಡುವುದಿಲ್ಲ. ಅವರು ಬಿಜೆಪಿಯ ಬಿ ಟೀಂ. ಜೆಡಿಎಸ್ನವರೊಂದಿಗೆ ನಾವು ಸರ್ಕಾರ ಮಾಡಿದ್ದೆವು. ಏಕೆಂದರೆ, ಕೇವಲ 37 ಜನ ಶಾಕಸರಿದ್ದರು.
ಹೆಚ್‌ಡಿಕೆ ಮುಖ್ಯಮಂತ್ರಿ ಮಾಡಿದ್ದು ನಮ್ಮ ಕಾಂಗ್ರೆಸ್ ಪಕ್ಷ. ಚುನಾವಣೆ ಹತ್ತಿರ ಬಂದ ಬಳಿಕ ನನ್ನ ಕ್ಷೇತ್ರವನ್ನು ಬಹಿರಂಗ ಪಡಿಸುತ್ತೇನೆ. ನಮಗೂ ರಾಹುಲ್ ಗಾಂಧಿ 150 ಕ್ಷೇತ್ರವನ್ನು ಗೆಲ್ಲಲು ಹೇಳಿದ್ದಾರೆ. ಸಿಎಂ ಯಾರು ಎಂಬುದು ಹೈಕಮಾಂಡ್ಗೆ ಬಿಟ್ಟ ವಿಚಾರ. ಚುನಾವಣೆಯಲ್ಲಿ ಬಹುಮತ ಬರಬೇಕು. ಆಗ ಸಿಎಂ ಯಾರು ಎಂದು ತಿಳಿಯುತ್ತದೆ ಎಂದರು.
ಎಸ್‌ಸಿ/ಎಸ್ಟಿ ಸಮುದಾಯಕ್ಕೆ ಉಚಿತ ವಿದ್ಯುತ್ :ಎಸ್‌ಸಿ/ಎಸ್ಟಿ ಸಮುದಾಯಕ್ಕೆ 75 ಯೂನಿಟ್ ವಿದ್ಯುತ್ ಉಚಿತ ನೀಡ್ತೇವೆ ಎಂದು ಮುಧೋಳ್ನಲ್ಲಿ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಆ ಯೋಜನೆ ಜಾರಿಗೆ ಬರಲಿ. ಆವಾಗ ನೋಡೋಣ. ಇನ್ನು ಎಸ್‌ಸಿ/ಎಸ್ಟಿ ಸಮುದಾಯಕ್ಕೆ ಎಸ್ಇಪಿಟಿಎಸ್ಪಿಯಿಂದ 7,889 ಕೋಟಿ ರೂಪಾಯಿನಷ್ಟು ಹಣವನ್ನು ರಾಜ್ಯ ಸರ್ಕಾರಾಧಿಕಾರಕ್ಕೆ ಬಂದ ಬಳಿಕ ಡೈವರ್ಟ್ ಮಾಡಿದೆ.
ಇವರು ಅನುದಾನವನ್ನು ಕಡಿಮೆ ಮಾಡಿದ್ದಾರೆ. ಅದು ಒಟ್ಟು 47 ಸಾವಿರ ಕೋಟಿ ಆಗ್ಬೇಕಾಗಿತ್ತು. ಕೇವಲ 28 ಸಾವಿರ ಕೋಟಿಗೆ ತಂದು ನಿಲ್ಲಿಸಿದ್ದಾರೆ. ಇದನ್ನು ಸರಿ ಪಡಿಸುವ ಬದಲು ಅಲ್ಲಿ ಎಸ್‌ಸಿ/ಎಸ್ಟಿ ಸಮುದಾಯಯಕ್ಕೆ ಅನ್ಯಾಯ ಮಾಡಿದ್ದಾರೆ. ಇವಾಗ ಅವರಿಗೆ ಉಚಿತ ವಿದ್ಯುತ್ ನೀಡ್ತೇವೆ ಎಂದು ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡ್ಬಾರದು ಎಂದು ವಾಗ್ದಾಳಿ ನಡೆಸಿದರು.