ದಾವಣಗೆರೆ:ಈ ಶಾಂತಿಯ ತೋಟವನ್ನು ಯಾರು ಅಪವಿತ್ರ ಮಾಡಿದ್ದರೋ ಅದನ್ನು ಪವಿತ್ರ ಮಾಡಲು ಗಂಗಾ ಜಲ ಸಂಗ್ರಹ ಮಾಡಿದ್ದೇವೆ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದರು. ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮನು ಬಿಜೆಪಿ ಬಿ ಟೀಂ ಅಂತಾ ಬಿಂಬಿಸಿದರು. 2018ರ ಚುನಾವಣೆಯಲ್ಲಿ ಅತಂತ್ರ ಆಯಿತು. ಅಧಿಕಾರ ಬಿಜೆಪಿಗೆ ಹೋಯಿತು. ಇನ್ನು ಸಮ್ಮಿಶ್ರ ಸರ್ಕಾರ ಮಾಡಿದಾಗ ನನ್ನನ್ನು ಹಾಳು ಮಾಡಿದರು ಎಂದು ಕಾಂಗ್ರೆಸ್ ನಾಯಕರ ನಡೆಗೆ ಹೆಚ್ಡಿಕೆ ಬೇಸರ ವ್ಯಕ್ತಪಡಿಸಿದರು.
ರಾಜ್ಯ ಶಾಂತಿಯ ತೋಟವಾಬೇಕು: ನಮ್ಮ ರಾಜ್ಯ ಕುವೆಂಪುರವರ ನಾಡಗೀತೆಯಲ್ಲಿರುವ ಶಾಂತಿ ತೋಟವಾಗಬೇಕು. ಕರ್ನಾಟಕ ಸರ್ವ ಜನಾಂಗದ ಶಾಂತಿ ತೋಟ. ರೈತರು ಹಾಗೂ ಮುಸ್ಲಿಮರ ನಡುವೆ ತಲಾತಲಾಂತರಗಳಿಂದ ಸಂಬಂಧ ಇದೆ. ನಾವು ಜತೆಗೆ ಬದುಕಬೇಕಾಗಿದೆ. ಮಾವು, ಹುಣಸೆ, ರೇಷ್ಮೆ ಬೆಳೆಗಾರರನ್ನು ಉಳಿಸುವುದರಲ್ಲಿ ಮುಸ್ಲಿಮರ ಪಾತ್ರ ಹೆಚ್ಚಿದೆ. ಅಧಿಕಾರದಾಸೆಗೆ ಯುವಕರಿಗೆ ಧರ್ಮ ಧರ್ಮ, ಹಿಂದುತ್ವ ಎಂದು ಏನು ಸಾಧನೆ ಮಾಡುತ್ತೀರಿ?. ಗ್ಯಾಸ್, ಡೀಸೆಲ್ ಪೆಟ್ರೋಲ್, ಅಡಿಗೆ ಎಣ್ಣೆ ಬೆಲೆ ಏರಿಕೆ ಆಗಿದೆ. ಇದರ ಬಗ್ಗೆ ಗಮನ ಹರಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.