ದಾವಣಗೆರೆ:ಸುಮಾರು 50 ವರ್ಷಗಳೇ ಉರುಳಿರುವ ಶಾಲೆಗೆ ದುರಸ್ತಿ ಕಾರ್ಯ ಮಾತ್ರ ಮರೀಚಿಕೆಯಾಗಿದೆ. ಶಾಲೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಛಾವಣಿ ಸೋರುತ್ತಿದೆ. ಮಳೆ ಬಂದರೆ ಮಕ್ಕಳಿಗೆ ರಜೆ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಸ್ಥರು ಶಾಲೆಗೆ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಸತ್ಯನಾರಾಯಣ ಪುರ ಗ್ರಾಮ ಕೇವಲ 80 ಕುಟುಂಬಗಳಿಂದ ಕೂಡಿರುವ ಪುಟ್ಟ ಗ್ರಾಮ, ಆ ಗ್ರಾಮದಲ್ಲಿ ಒಂದರಿಂದ ಐದನೇ ತರಗತಿಯವರೆಗೆ ಪುಟ್ಟ ಶಾಲೆಯನ್ನು ನಿರ್ಮಿಸಿ ಐವತ್ತು ವರ್ಷಗಳೇ ಉರುಳಿವೆ. ಅ ಶಾಲೆಯಲ್ಲಿ ಐವತ್ತಕ್ಕೂ ಹೆಚ್ಚು ಮಕ್ಕಳು ತಮ್ಮ ಜೀವವನ್ನು ಅಂಗೈಲ್ಲಿಟ್ಟುಕೊಂಡು ಪಾಠ ಕಲಿಯುತ್ತಿದ್ದಾರೆ.
ಐವತ್ತು ವರ್ಷ ಕಾಲ ಹಳೆಯ ಶಾಲೆಗೆ ಬೇಕಾಗಿದೆ ಕಾಯಕಲ್ಪ ಶಾಲಾ ಕಟ್ಟಡದ ಸ್ಥಿತಿ ಅರಿತಿರುವ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅಲ್ಲದೇ ಶಾಲೆಯಲ್ಲಿ ಶಿಕ್ಷಕರ ಕೊರತೆಯೂ ಇದೆ. ಕೇವಲ ಇಬ್ಬರೇ ಶಿಕ್ಷಕರು ಶಾಲೆ ನಡೆಸುತ್ತಿದ್ದಾರೆ. ಇದರ ನಡುವೆ ಶಿಕ್ಷಕರೇ ಮನೆ ಮನೆಗೆ ತೆರಳಿ ಪೋಷಕರನ್ನು ಒಪ್ಪಿಸಿ ಮಕ್ಕಳನ್ನು ನೋಂದಣಿ ಮಾಡಿಸುತ್ತಿದ್ದಾರೆ.
ನೂತನ ಕಟ್ಟಡ ಕಟ್ಟುವಂತೆ ಗ್ರಾಮಸ್ಥರು ಶಾಸಕರಿಗೆ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಇಡೀ ಸತ್ಯನಾರಾಯಣ ಪುರ ಗ್ರಾಮದ ಜನರು ಜಿಲ್ಲಾಡಳಿತದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಒಟ್ಟಾರೆ ಈ ಶಾಲೆಯಲ್ಲಿ ಮುಗ್ದ ಜೀವಗಳು ಕಲಿಯುತ್ತಿದ್ದು, ಅನಾಹುತ ಸಂಭವಿಸುವ ಮುನ್ನ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಇತ್ತ ಗಮನ ಹರಿಸಿ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕಾಗಿದೆ.
ಇದನ್ನೂ ಓದಿ:ಮನಕದ್ದ ದಿನದಿಂದ ನನ್ನ ಬದುಕಿನಲ್ಲಿ ಪಲ್ಲವಿಸಿದ ನನ್ನ 'ಪಲ್ಲವಿ' : ಪತ್ನಿಗೆ ಸಿ ಟಿ ರವಿ ಬಹಿರಂಗ ಪತ್ರ