ಹರಿಹರ: ಸಾರಥಿ-ಚಿಕ್ಕಬಿದರಿ ನಡುವಿನ ಹಳ್ಳಕ್ಕೆ ಅಡ್ಡಲಾಗಿ ಹೊಸ ಸೇತುವೆಯನ್ನು ಮಳೆಗಾಲಕ್ಕೂ ಮುನ್ನ ನಿರ್ಮಿಸಲಾಗುವುದೆಂದು ಶಾಸಕ ಎಸ್. ರಾಮಪ್ಪ ಭರವಸೆ ನೀಡಿದರು.
ತಾಲೂಕಿನ ಸಾರಥಿ-ಚಿಕ್ಕಬಿದರಿ ನಡುವಿನ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹಳ್ಳದ ಎತ್ತರ ಕಡಿಮೆ ಇರುವುದರಿಂದ ಪ್ರತಿ ಮಳೆಗಾಲದಲ್ಲಿ ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತವಾಗುತ್ತಿತ್ತು. ಎತ್ತರದ ಹೊಸ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿ, ಟೆಂಡರ್ ಪ್ರಕ್ರಿಯೆ ಆದರೂ ಗುತ್ತಿಗೆದಾರರು ಕಾಮಗಾರಿ ಆರಂಭಿಸಲು ಬರುತ್ತಿರಲಿಲ್ಲ. ಅದಕ್ಕಾಗಿ ಕಳೆದ 20 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು.
ಈ ಬಾರಿಯೂ ಏಳು ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸೇತುವೆ ನಿರ್ಮಿಸಲು ಆಂಧ್ರದ ಗುತ್ತಿಗೆದಾರರಿಗೆ ಟೆಂಡರ್ ಆಗಿತ್ತು. ಆದರೆ ಗುತ್ತಿಗೆದಾರ ಕಾಮಗಾರಿ ಆರಂಭಿಸಿದ್ದಿಲ್ಲ. ಕೆಆರ್‌ಐಡಿಸಿಎಲ್ ನಿರ್ದೇಶಕರ ಸಮ್ಮುಖದಲ್ಲಿ ಗುತ್ತಿಗೆದಾರರನ್ನು ಕರೆಯಿಸಿ ಚರ್ಚೆ ಮಾಡಿ ಕಾಮಗಾರಿ ಆರಂಭಿಸಲು ತಾಕೀತು ಮಾಡಿಸಿದ ಪರಿಣಾಮ ಈಗ ಮುಹೂರ್ತ ಕೂಡಿ ಬಂತು ಎಂದರು.
ನೂತನ ಸೇತುವೆ 100 ಮೀ. ಉದ್ದ, 10.50 ಮೀಟರ್ ಅಗಲ, 5 ಮೀ. ಎತ್ತರವಿರಲಿದೆ. ಮಳೆಗಾಲದಲ್ಲಿ ನದಿ ಹಿನ್ನೀರಿನಿಂದ ಸೇತುವೆ ಮೇಲೆ ಜನ, ವಾಹನ ಸಂಚಾರಕ್ಕೆ ವ್ಯತ್ಯಯವಾಗುವುದು ತಪ್ಪುತ್ತದೆ. ಮಳೆಗಾಲ ಆರಂಭಕ್ಕೆ ಮುನ್ನ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.