ದಾವಣಗೆರೆ:ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಹೇಡಿ ಎಂದು ಕರೆದಿರುವ ಮಾಜಿ ಸಿಎಂ ಸಿದ್ದರಾಮಯ್ಯರ ವಿರುದ್ಧ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಗುಡುಗಿದ್ದಾರೆ.
ಜಿಲ್ಲೆಯ ನ್ಯಾಮತಿ ಪಟ್ಟಣದ ಸವಳಂಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಬಿಎಸ್ವೈ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು, ಕಾಂಗ್ರೆಸ್ನಲ್ಲಿ ವರಿಷ್ಠರು, ಹೈಕಮಾಂಡ್ ಎಂಬುದೇ ಇಲ್ಲ. ಯಡಿಯೂರಪ್ಪರನ್ನ ಹೇಡಿ ಸಿಎಂ ಎನ್ನುವ ಹಗುರ ಹೇಳಿಕೆ ಬೇಡ. ಒಂದೂವರೆ ತಿಂಗಳಾದರೂ ಪ್ರತಿಪಕ್ಷ ನಾಯಕನ ಆಯ್ಕೆ ಮಾಡುವ ಯೋಗ್ಯತೆ ನಿಮ್ಮ ಪಕ್ಷಕ್ಕಿಲ್ಲ ಎಂದು ರೇಣುಕಾಚಾರ್ಯ ಟೀಕಿಸಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ಎಲ್ಲಾ ರೀತಿಯ ನೆರವು ನೀಡಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನಿಮ್ಮ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ನೆರವು ನೀಡಿಲ್ಲ. ಆದ್ರೆ ಈಗ ಸಿದ್ದರಾಮಯ್ಯ ಬಿಜೆಪಿ ವರಿಷ್ಠರನ್ನು ದೂರುತ್ತಿದ್ದಾರೆ. ಮೂರುವರೆ ವರ್ಷ ಬಿಜೆಪಿ ರಾಜ್ಯದಲ್ಲಿ ಒಳ್ಳೆಯ ಆಡಳಿತ ನೀಡಲಿದೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲವೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಸ್ಪಷ್ಟಪಡಿಸಿದರು.
ಕಾಂಗ್ರೆಸ್ನ ಇನ್ನೂ ಕೆಲ ಶಾಸಕರು ರಾಜೀನಾಮೆ ನೀಡಲಿದ್ದಾರೆ. ಕಾಂಗ್ರೆಸ್ ಪಕ್ಷ ದೇಶ, ರಾಜ್ಯದಲ್ಲಿ ಮುಳುಗುವ ಹಡಗು ಎಂದು ಎಂ. ಪಿ. ರೇಣುಕಾಚಾರ್ಯ ಹೇಳಿದರು.
ನಾವು ಮೂರು ತಿಂಗಳು ಇರ್ತೇವೋ, ಮೂರು ವರ್ಷ ಇರ್ತೇವೋ ಗೊತ್ತಿಲ್ಲ:
ಇನ್ನೊಂದೆಡೆ, ನಾವು ಅಧಿಕಾರದಲ್ಲಿ ಮೂರು ತಿಂಗಳು ಇರ್ತಿವೋ ಅಥವಾ ಮೂರು ವರ್ಷ ಇರ್ತಿವೋ ಗೊತ್ತಿಲ್ಲ. ನಾವು ಯಾವಾಗಬೇಕಾದರೂ ಮಾಜಿಗಳಾಗುತ್ತೇವೆ ಎನ್ನುವ ರೇಣುಕಾಚಾರ್ಯ ಮೂಲಕ ಅಚ್ಚರಿ ಮೂಡಿಸಿದರು. ಸರ್ಕಾರಿ ಅಧಿಕಾರಿಗಳು ಮಾತ್ರ 60 ವರ್ಷ ಕೆಲಸ ಮಾಡುತ್ತಲೇ ಇರ್ತಾರೆ. ಚುನಾವಣೆ ಯಾವ ವರ್ಷದಲ್ಲಿ ಬರುತ್ತೆ ಅನ್ನೋದು ಅವರಿಗೂ ಗೊತ್ತಿಲ್ಲ. ಆದರೆ ಅಧಿಕಾರಿಗಳು ಮಾತ್ರ ಯಾವಾಗಲೂ ಕೆಲಸ ಮಾಡಬೇಕು ಎಂದು ಹೇಳಿದ್ರು.