ದಾವಣಗೆರೆ:ಅವರು ವೃತ್ತಿಯಲ್ಲಿ ವೈದ್ಯೆ, ರೋಗಿಗಳನ್ನು ಆರೈಕೆ ಮಾಡುವುದರೊಂದಿಗೆ ಮನೆಯಲ್ಲೇ ಸುಂದರ ಕೈ ತೋಟವನ್ನು ಮಾಡಿಕೊಂಡು ಇಡೀ ಮನೆಯನ್ನು ಹಚ್ಚ ಹಸಿರಾಗಿ ಮಾಡಿದ್ದಾರೆ. ಮನೆ ಸುತ್ತ ಎಲ್ಲಿ ನೋಡಿದರಲ್ಲಿ ಆಕ್ಸಿಜನ್ ನೀಡುವ ಪ್ಲಾಂಟ್ಗಳನ್ನು ನೆಟ್ಟಿರುವ ಇವರು ತರಕಾರಿ ಬೆಳೆದು ಅದನ್ನು ಮನೆಗೆ ಬಳಕೆ ಮಾಡುತ್ತಿದ್ದಾರೆ. ಇದಲ್ಲದೆ ತಾರಸಿಯಲ್ಲೂ ತರಕಾರಿ ಬೆಳೆದಿರುವ ಇವರು ಐದು ವರ್ಷಗಳಿಂದ ಇಡೀ ದಾವಣಗೆರೆಯಲ್ಲಿ ಮನೆ ಮಾತಾಗಿದ್ದಾರೆ.
ನಗರದ ಎಸ್ ಎಸ್ ಬಡಾವಣೆಯ ನಿವಾಸಿಯಾದ ವೈದ್ಯೆ ಶಾಂತ ಭಟ್ ಅವರು ಐದು ವರ್ಷಗಳಿಂದ ವೈದ್ಯೆ ವೃತ್ತಿ ಮಾಡುತ್ತಲೇ ತಮ್ಮ ಮನೆಯ ಪಕ್ಕ ಹಾಗು ತಾರಸಿಯಲ್ಲಿ ಪುಟ್ಟ ಕೈ ತೋಟ ಮಾಡಿಕೊಮಡು ಹಸಿರು ವಾತಾವರಣ ನಿರ್ಮಿಸಿಕೊಂಡಿದ್ದಾರೆ. ನಗರದಲ್ಲಿ ಕೈ ತೋಟ ಮಾಡುವುದು ಅಷ್ಟು ಸುಲಭವಲ್ಲ, ಆದರೆ ಶಾಂತ ಭಟ್ ಅವರು ಇದನ್ನು ಮಾಡಿತೋರಿಸಿದ್ದಾರೆ.
ತಾರಸಿ ಮೇಲೆ ಕೈತೋಟ: ಮೊಟ್ಟ ಮೊದಲು ತಮ್ಮ ಮನೆಯ ತಾರಾಸಿಯಲ್ಲಿ ಪುಟ್ಟ ಕೈತೋಟ ಮಾಡಿಕೊಂಡು ಎಲ್ಲಾ ತರಹದ ಸೊಪ್ಪು, ಹೀರೆಕಾಯಿ, ಟೊಮೆಟೊ, ಜವಳಿಕಾಯಿ, ಬದನೆಕಾಯಿ, ಚಪ್ಪರದ ಅವರೆ ಕಾಯಿ, ನುಗ್ಗೆ, ಕರಿಬೇವು, ಬಸಳೆ ಸೊಪ್ಪು, ಚಕ್ರಮನಿ ಸೊಪ್ಪು ಹಾಗು ಡ್ರ್ಯಾಗನ್ ಫ್ರುಟ್ ಗಿಡವನ್ನು ಕೂಡ ಹಾಕಿ ಅದರಿಂದ ಬರುವ ತರಕಾರಿಯನ್ನು ಮನೆಗೆ ಬಳಸುತ್ತಿದ್ದಾರೆ.
ಹಸಿ ಕಸವೇ ಇಲ್ಲಿ ಗೊಬ್ಬರ: ಮನೆಯ ಪಕ್ಕದಲ್ಲೇ ಇವರು ಮತ್ತೊಂದು ಕೈ ತೋಟ ಮಾಡಿಕೊಂಡು ಅಲ್ಲು ಕೂಡ ಸೀಮೆ ಬದನೆಕಾಯಿ, ಕುಂಬಳಕಾಯಿ, ಪಪ್ಪಾಯಿ, ಸೀಬೆ, ಮೂಲಂಗಿ, ಕ್ಯಾರೆಟ್, ಈರುಳ್ಳಿ ಕೂಡ ಹಾಕಿದ್ದಾರೆ. ದಡ್ಡಿ ಸೊಪ್ಪು, ಚೈನಾ ಗ್ರಾಸ್, ಬೋಗನ್ ವಿಲ್ಲಾ, ಸೀತಾಫಲ, ಕಿರುನೆಲ್ಲಿಕಾಯಿ ಹೀಗೆ ತರಹೇವಾರಿ ತರಕಾರಿ ಹಾಗು ಸೊಪ್ಪು ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕೈ ತೋಟಕ್ಕೆ ಮನೆಯಲ್ಲಿರುವ ಹಸಿ ಕಸವನ್ನು ಬಳಕೆ ಮಾಡಿ ಸಾವಯವ ಗೊಬ್ಬರ ಉತ್ಪಾದಿಸುವ ಮಾಡಿಕೊಳ್ಳುವ ಮೂಲಕ ಕೈ ತೋಟಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ ವೈದ್ಯೆ ಶಾಂತ ಭಟ್.