ದಾವಣಗೆರೆ: ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಸಿಎಂ ಬಗ್ಗೆ ಚರ್ಚೆ ಆರಂಭ ಆಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವರ ಹೆಸರುಗಳು ಮುನ್ನೆಲೆಗೆ ಬರುತ್ತಿವೆ. ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗದಲ್ಲಿ ಕೈ ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೆ ಜೈ ಎಂದು ಘೋಷಣೆ ಕೂಗಿದ್ದು, ಭಾವಿ ಸಿಎಂ ಪೈಪೋಟಿಗೆ ತುಪ್ಪ ಸುರಿದಂತಾಗಿದೆ.
ಸೂರನಗೊಂಡ ಕೊಪ್ಪದಲ್ಲಿರುವ ಭಾಯಗಡ್ ಸೇವಾಲಾಲ್ ಸಂತರ ಜನ್ಮ ಸ್ಥಳದಲ್ಲಿ ಲಂಬಾಣಿ ಸಮುದಾಯದ ಜನರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಡಿಕೆಶಿಗೆ ಹೂಮಳೆ ಸುರಿಸಿ ಕೈ ಕಾರ್ಯಕರ್ತರು ಸ್ವಾಗತಿಸಿದರು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಹಿಂದ ಮತಗಳ ಮೇಲೆ ಡಿಕೆಶಿ ಕಣ್ಣಿಟ್ಟಿದ್ದು, ಬಂಜಾರ ಸಮುದಾಯದ ಜನರೊಂದಿಗೆ ಸಂವಾದ ನಡೆಸಿ ಸಮಸ್ಯೆಗಳನ್ನು ಆಲಿಸಿದರು.
ಕೆಪಿಸಿಸಿ ಅಧ್ಯಕ್ಷರಿಗೆ ಅದ್ಧೂರಿ ಸ್ವಾಗತ
ಚುನಾವಣೆ ತಯಾರಿಯಲ್ಲಿರುವ ಕೆಪಿಸಿಸಿ ಅಧ್ಯಕ್ಷರು ಶಿವಮೊಗ್ಗ ಹಾಗು ದಾವಣಗೆರೆ ಪ್ರವಾಸ ಕೈಗೊಂಡಿದ್ದಾರೆ. ದಾವಣಗೆರೆಗೆ ಆಗಮಿಸಿದ ಡಿಕೆಶಿಗೆ ಜಿಲ್ಲಾ ಕಾಂಗ್ರೆಸ್ ಹಾಗೂ ಕಿಸಾನ್ ಕಾಂಗ್ರೆಸ್ ನಿಂದ ಅದ್ಧೂರಿ ಸ್ವಾಗತ ಕೋರಲಾಯಿತು.