ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್, ಜಗಳೂರು ತಾಲೂಕಿನ ಕೆಲವೆಡೆ ಭೇಟಿ ನೀಡಿ ಜನರ ಸಮಸ್ಯೆ ಅರಿಯುವ ಪ್ರಯತ್ನ ಮಾಡಿದರು. ಸಮಾರೋಪಾದಿಯಲ್ಲಿ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಗಳೂರು ತಾಲೂಕಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್, ಅಧಿಕಾರಿಗಳೊಂದಿಗೆ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಅರಿಯುವ ಪ್ರಯತ್ನ ಮಾಡಿದರು. ಈ ವೇಳೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸವನ್ನೂ ಮಾಡಿದರು. ಸಮರ್ಪಕವಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಜಗಳೂರು ತಾಲೂಕು ಒಂದರಲ್ಲಿಯೇ ಸುಮಾರು 121 ಹಳ್ಳಿಗಳಲ್ಲಿ ನೀರಿಗೆ ತತ್ವಾರ ಎದುರಾಗಿದೆ. ಈ ಸಂಬಂಧ ಕೆಲಸ ಮಾಡದ ಅಧಿಕಾರಿಗಳನ್ನು ಸಚಿವರು ಪ್ರಶ್ನಿಸಿದರು. 50 ಗ್ರಾಮಗಳಲ್ಲಿ ತೀವ್ರ ನೀರಿನ ಸಮಸ್ಯೆ ಇದ್ದರೆ, ಉಳಿದ ಹಳ್ಳಿಗಳು ಇದಕ್ಕಿಂತ ಸ್ವಲ್ಪ ಪರವಾಗಿಲ್ಲ ಅಷ್ಟೇ. 279 ಟ್ಯಾಂಕರ್ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದ್ದರೂ ಸಾಕಾಗುತ್ತಿಲ್ಲ ಎಂಬುದು ಜನರ ಅಳಲು.
ಜಿಲ್ಲಾ ಉಸ್ತುವಾರಿ ಸಚಿವರ ಖಡಕ್ ಸೂಚನೆ 60 ಕೊಳವೆ ಬಾವಿಗಳಿಂದ ನೀರು ತೆಗೆದು, ಹಳ್ಳಿ ಹಳ್ಳಿಗಳಿಗೆ ಟ್ಯಾಂಕರ್ಗಳ ಮೂಲಕ ಪೂರೈಸಲಾಗುತ್ತಿದೆ. ತಾಲೂಕಿನಲ್ಲಿ ಎರಡೇ ಗೋ ಶಾಲೆಗಳಿವೆ. ದೂರದೂರಿಂದ ಬಂದು ಮೇವು ತೆಗೆದುಕೊಂಡು ಹೋಗುವುದೇ ರೈತರ ಬಹುದೊಡ್ಡ ಸಮಸ್ಯೆಯಾಗಿದೆ. ತಾಲೂಕಿನ ಮೂಲೆ ಮೂಲೆಗಳಿಂದ ಇಲ್ಲಿಗೆ ಬಂದು ಮೇವು ತೆಗೆದುಕೊಂಡು ಹೋಗಬೇಕು. ಒಂದೆಡೆ ನೀರಿಲ್ಲ, ಮತ್ತೊಂದೆಡೆ ಬೆಳೆ ಒಣಗಿ ಹೋಗಿವೆ.
ಹೆಚ್ಚು ಹಣ ಖರ್ಚು ಮಾಡಿ ಇಲ್ಲಿಗೆ ಬಂದು ತೆಗೆದುಕೊಂಡು ಹೋಗುವ ಸಾಮರ್ಥ್ಯ ಎಲ್ಲರಿಗೂ ಇರುವುದಿಲ್ಲ. ಹೀಗಾಗಿ, ಹಲವೆಡೆ ಗೋಶಾಲೆಗಳನ್ನು ಪ್ರಾರಂಭಿಸಬೇಕು ಎಂದು ಸಚಿವರನ್ನು ಸ್ಥಳೀಯರು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ತಾಲೂಕಿನ ಕೋಡದಗುಡ್ಡ, ಹಿರೆಮಲ್ಲನಹೊಳೆಯಲ್ಲಿ ಇನ್ನೆರಡು ಗೋ ಶಾಲೆಗಳನ್ನು ತೆರೆಯಲು ಜಿಲ್ಲಾಡಳಿತಕ್ಕೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದರು. ಅಲ್ಲದೆ ಈಗ ಬಿಡುಗಡೆ ಮಾಡಿರುವ ಹಣ ಬಳಸಿಕೊಂಡು ಕೆಲಸ ಮಾಡಿ. ಇನ್ನೂ ಹೆಚ್ಚಿನ ಹಣ ಬೇಕಿದ್ದರೆ ಸರ್ಕಾರಕ್ಕೆ ವರದಿ ಕಳುಹಿಸಿ. ಹಣ ಮಂಜೂರು ಮಾಡಿಸುವ ಕೆಲಸ ನನ್ನದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.