ದಾವಣಗೆರೆ:ಕೊರೊನಾ ಎರಡನೇ ಅಲೆ ಗ್ರಾಮೀಣ ಪ್ರದೇಶದಲ್ಲಿ ಅಟ್ಟಹಾಸ ಮುಂದುವರೆಸಿದೆ. ಜಿಲ್ಲೆಯಲ್ಲಿ ಶೇ 70ರಷ್ಟು ಸೋಂಕು ಹಳ್ಳಿಗಳಲ್ಲಿ ಕಾಣಿಸಿಕೊಂಡಿದೆ. ಮಹಾಮಾರಿಯ ಕೊಂಡಿ ಮುರಿಯಲು ಜಿಲ್ಲೆಯ ದಿದ್ದಿಗೆ ಗ್ರಾಮದ ಯುವಕರ ಶ್ರಮಿಸುತ್ತಿದ್ದು, 'ಯೂತ್ ಫಾರ್ ಸೇವಾ' ಎಂಬ ಬ್ಯಾನರ್ ಅಡಿಯಲ್ಲಿ ಜನಜಾಗೃತಿ ಜೊತೆಗೆ ಚಿಕಿತ್ಸೆ ನೀಡುವ ಕಾರ್ಯ ಮಾಡುತ್ತಿದ್ದಾರೆ.
ಕೊರೊನಾ ಕಟ್ಟಿಹಾಕಲು ಪಣತೊಟ್ಟ ದಿದ್ದಿಗೆ ಗ್ರಾಮದ ಯುವಪಡೆ - ದಾವಣಗೆರೆ ದಿದ್ದಿಗೆ ಯುವಕರ ಕಾರ್ಯ
ಜಗಳೂರು ತಾಲೂಕಿನ ದಿದ್ದಿಗೆ ಗ್ರಾಮದ 18 ಜನ ವಿದ್ಯಾವಂತ ಯುವಕರ ತಂಡ ತಮ್ಮ ಗ್ರಾಮದ ಜನರನ್ನು ಕೊರೊನಾದಿಂದ ಕಾಪಾಡಲು ಟೊಂಕ ಕಟ್ಟಿ ನಿಂತಿದ್ದಾರೆ.
ಗ್ರಾ.ಪಂ ಸದಸ್ಯ ಪ್ರಶಾಂತ್ ಅವರು ವಿದ್ಯಾವಂತ ಯುವಕರನ್ನು ಒಗ್ಗೂಡಿಸಿ ಈ ಸೇವಾ ಕಾರ್ಯ ಮಾಡುತ್ತಿದ್ದಾರೆ. ಗ್ರಾಮದ ಪ್ರತಿ ಬೀದಿಗೆ ಒಬ್ಬ ಸ್ವಯಂಸೇವಕರನ್ನು ನೇಮಕ ಮಾಡಿದ್ದು, ಅನಾರೋಗ್ಯದಿಂದ ಬಳಲುವ ಜನರ ಮೇಲೆ ನಿಗಾ ಇಡಲಾಗುತ್ತಿದೆ. ಜೊತೆಗೆ ಆಸ್ಪತ್ರೆಗೆ ಕಳುಹಿಸುವುದು, ಕೋವಿಡ್ ಟೆಸ್ಟ್ ಮಾಡಿಸುವ ಕೆಲಸ ನಡೆಯುತ್ತಿದೆ. ಆರೋಗ್ಯ ಇಲಾಖೆಯ ಮಾರ್ಗದರ್ಶನದಲ್ಲಿ 2 ಸಾವಿರ ಮೌಲ್ಯದ ಕೊರೊನಾ ಮೆಡಿಕಲ್ ಕಿಟ್ಗಳನ್ನು ಸೋಂಕಿನ ಲಕ್ಷಣಗಳು ಇರುವವರಿಗೆ ಸಂಘಸಂಸ್ಥೆಗಳ ಸಹಾಯದಿಂದ ಉಚಿತವಾಗಿ ನೀಡುತ್ತಿದ್ದಾರೆ.
ಎರಡು ದಿನಗಳಿಗೊಮ್ಮೆ ಮೈಕ್ ಮೂಲಕ ಜನರಿಗೆ ಕೋವಿಡ್ ನಿಯಮಾವಳಿಗಳನ್ನು ಪಾಲನೆ ಮಾಡಿ, ಸೋಂಕಿನ ಲಕ್ಷಣಗಳಿದ್ದರೆ ಕೂಡಲೇ ಆಶಾ ಕಾರ್ಯಕರ್ತರಿಗೆ ಹಾಗೂ ತಮಗೆ ತಿಳಿಸುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೆ ಮನೆ ಮನೆಗೆ ಹೋಗಿ ಕಿಟ್ ನೀಡಿ ಕೋವಿಡ್‌ನಿಂದ ಜಾಗೃತರಾಗಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಜನರಿಗೆ ನೀಡಲಾಗುತ್ತಿರುವ ಮೆಡಿಕಲ್ ಕಿಟ್ನಲ್ಲಿ ಪಲ್ಸ್ ಆಕ್ಸಿಮೀಟರ್, ಥರ್ಮಾಮೀಟರ್, ಕೊರೊನಾ ಸಂಬಂಧಿಸಿದ ಟ್ಯಾಬ್ಲೆಟ್ಸ್, ಓಆರ್ಎಸ್, ವಿಟಮಿನ್ ಸಿ ಹಾಗು ಡಿ ಟ್ಯಾಬ್ಲೆಟ್ಗಳು ಲಭ್ಯ ಇವೆ. ಇನ್ನು ನೀಡಿದ ಮಾತ್ರೆಗಳನ್ನು ಯಾವ ರೀತಿ ಬಳಕೆ ಮಾಡಬೇಕು ಎಂಬ ಬಗ್ಗೆ ಒಂದು ಕರ ಪತ್ರವನ್ನು ಕೂಡ ಮಾಡಲಾಗಿದೆ.