ದಾವಣಗೆರೆ: ದಾವಣಗೆರೆ ಜಿಲ್ಲೆ ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದುವರೆದಿದ್ದರೂ ರಾಜಕೀಯವಾಗಿ ಮಾತ್ರ ಹಿಂದುಳಿದಿದೆ ಎನ್ನಲಾಗಿದೆ. 7 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದರೂ ಪರಿಷತ್ ಚುನಾವಣೆಯಲ್ಲಿ ಮಾತ್ರ ಮಲತಾಯಿ ಧೋರಣೆ ಅನುಭವಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಈಗಾಗಲೇ ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ (Council Election) ಕಾವು ಹೆಚ್ಚಾಗತೊಡಗಿದ್ದು, ಚುನಾವಣಾ ಆಯೋಗ ದಿನಾಂಕ ಕೂಡ ನಿಗದಿ ಮಾಡಿದೆ. 25 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳೇ ಗೆಲುವು ಸಾಧಿಸಬೇಕು ಎಂದು ಮೂರು ಪಕ್ಷಗಳು ಕಸರತ್ತು ಪ್ರಾರಂಭಿಸಿವೆ. ಈ ಬೆನ್ನಲ್ಲೇ ಇದೀಗ ದಾವಣಗೆರೆಯನ್ನು ವಿಧಾನ ಪರಿಷತ್ ಕ್ಷೇತ್ರವನ್ನಾಗಿ ಮಾಡಿ ಎನ್ನುವ ಕೂಗು ಕೇಳಿ ಬರುತ್ತಿದೆ.
ಭೌಗೋಳಿಕವಾಗಿ ವಿಸ್ತಾರ ಹೊಂದಿರುವ ದಾವಣಗೆರೆಯಲ್ಲಿ ಏಳು ವಿಧಾನಸಭಾ ಕ್ಷೇತ್ರ, ಒಂದು ಲೋಕಸಭಾ ಕ್ಷೇತ್ರವಿದ್ದು, ಈಗ ವಿಧಾನ ಪರಿಷತ್ ಕ್ಷೇತ್ರವನ್ನಾಗಿ ಮಾಡಿ ಎಂದು ಎಲ್ಲ ಪಕ್ಷದ ನಾಯಕರು ಮನವಿ ಮಾಡುತ್ತಿದ್ದಾರೆ. ಪ್ರತಿ ಬಾರಿ ವಿಧಾನ ಪರಿಷತ್ ಚುನಾವಣೆ ಬಂದಾಗ ಜಿಲ್ಲೆಯನ್ನು ಇಬ್ಭಾಗ ಮಾಡಲಾಗುತ್ತದೆ.
ಚಿತ್ರದುರ್ಗ ಕ್ಷೇತ್ರಕ್ಕೆ ದಾವಣಗೆರೆ ತಾಲೂಕು, ಹರಿಹರ, ಜಗಳೂರು ಸೇರಿದರೆ, ಇತ್ತ ಶಿವಮೊಗ್ಗಕ್ಕೆ ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲೂಕುಗಳನ್ನು ಸೇರಿಸಲಾಗುತ್ತದೆ. ಆದ್ದರಿಂದ ಮುಂದಿನ ಚುನಾವಣೆಯೊಳಗೆ ದಾವಣಗೆರೆಯನ್ನು ವಿಧಾನ ಪರಿಷತ್ ಕ್ಷೇತ್ರವನ್ನಾಗಿ ಮಾಡಿ ಎಂದು ಜಿಲ್ಲಾ ಮುಖಂಡರು ಮನವಿ ಮಾಡಿದ್ದಾರೆ.