ದಾವಣಗೆರೆ: ಅದೊಂದು ದಾವಣಗೆರೆ - ಚಿತ್ರದುರ್ಗ ಗಡಿಯನ್ನು ಹಂಚಿಕೊಂಡಿರುವ ಕುಗ್ರಾಮ. ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ ಆ ಗ್ರಾಮ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಗುಡ್ಡಗಳ ನಡುವೆ ಇರುವ 40 ಮನೆಗಳ ಈ ಪುಟ್ಟ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಹದಗೆಟ್ಟಿದ್ದರಿಂದ ಈ ಗ್ರಾಮದ ಹೆಣ್ಣು ಮಕ್ಕಳಿಗೆ ಗಂಡು ಹಾಗೂ ಗಂಡು ಮಕ್ಕಳಿಗೆ ಹೆಣ್ಣು ಕೊಡಲು ಬೇರೆ ಗ್ರಾಮದವರು ಹಿಂದೇಟು ಹಾಕ್ತಿದ್ದಾರೆ.
ಹಾಗಾಗಿ ಆ ಗ್ರಾಮದ ಯುವತಿಯೊಬ್ಬಳು ದಿಟ್ಟತನ ಪ್ರದರ್ಶಿಸಿ ಪ್ರಧಾನಿ, ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಸೂಕ್ತ ರಸ್ತೆ ಆಗೋವರೆಗೂ ಮದುವೆಯಾಗುವುದಿಲ್ಲ ಎಂದು ಶಪಥ ಮಾಡಿದ್ದಾಳೆ.
ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯ ರಾಂಪುರದ ನಿವಾಸಿ ಆಗಿರುವ ಬಿಂದು ಅವರು, ರಾಂಪುರ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಹಾಗೂ ಮೂಲ ಸೌಕರ್ಯಗಳು ದೊರಕುವ ತನಕ ಮದುವೆಯಾಗುವುದಿಲ್ಲ ಎಂದು ಶಪಥ ಮಾಡಿದ್ದಾಳಂತೆ.
ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದಲ್ಲಿರುವ ಈ ರಾಂಪುರ ಗ್ರಾಮ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಬಸ್ ಸಂಪರ್ಕ ಇಲ್ಲದೇ ಈ ಗ್ರಾಮದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮೊಟಕುಗೊಳಿಸಿದ್ದು, ಇನ್ನು ಕೆಲವರು ಏಳು ಕಿ.ಮೀ ನಡೆದುಕೊಂಡೇ ಶಾಲೆಗೆ ಸೇರುವ ಪರಿಸ್ಥಿತಿ ನಿರ್ಮಾಣ ಆಗಿದೆ.
''ರಸ್ತೆಯಾಗುವ ತನಕ ಮದುವೆಯಾಗಲ್ಲ''
ಈ ಗ್ರಾಮದಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಮಾಡಿಲ್ಲ ಎಂದು ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರಂತೆ. ಬೇರೆ ಗ್ರಾಮ ಮತ್ತು ರಾಂಪುರ ಗ್ರಾಮದ ಮಧ್ಯೆ ಸಂಪರ್ಕ ಕಲ್ಪಿಸುವ ರಸ್ತೆ ಕೂಡ ಹದಗೆಟ್ಟಿರುವುದರಿಂದ ಗ್ರಾಮಕ್ಕೆ ಆಗಮಿಸುವವರು ಹಿಡಿ ಶಾಪ ಹಾಕುವಂತಾಗಿದೆ.
ರಸ್ತೆ ಹಾಗೂ ಶಿಕ್ಷಣ ಸೇರಿದಂತೆ ಮೂಲ ಸೌಕರ್ಯಗಳಿಲ್ಲ ಎಂದು ಈ ರಾಂಪುರ ಗ್ರಾಮಕ್ಕೆ ಹೆಣ್ಣು ಕೊಡಲು ಹಾಗು ಇಲ್ಲಿಂದ ಹೆಣ್ಣನ್ನು ನೋಡಿ ಮದುವೆ ಮಾಡಿಸಲು ಜನ ಹಿಂದೇಟು ಹಾಕುತ್ತಿದ್ದಾರೆನ್ನುವ ಮಾತಿದೆ. ಹಾಗಾಗಿ ಗ್ರಾಮಕ್ಕೆ ರಸ್ತೆಯಾಗುವ ತನಕ ಯುವತಿ ಬಿಂದು ಮದುವೆಯಾಗುವುದಿಲ್ಲ ಎಂದು ಶಪಥ ಮಾಡಿದ್ದು, ಸಮಸ್ಯೆ ಬಗೆಹರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾಳೆ.
ಗ್ರಾಮಸ್ಥರ ಅಳಲು:
ಈ ರಾಂಪುರ ಗ್ರಾಮದ ಜನರು ತಮ್ಮ ಸಮಸ್ಯೆಗಳನ್ನು ಜನ ಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ದೂರಿದ್ದಾರೆ. ಶಿಕ್ಷಣ ಪಡೆಯುವುದು ಸವಾಲೇ ಆಗಿದೆ. ಇದಲ್ಲದೇ ಗ್ರಾಮದಲ್ಲಿ ಮೊಬೈಲ್ ಟವರ್ ಸಮಸ್ಯೆ ಇದ್ದು, ಕರೆ ಮಾಡಲು ಕೂಡ ಹೆಣಗಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಸರ್ಕಾರ ನೀಡುವ ಪಡಿತರ ಅಕ್ಕಿಯನ್ನು ಪಡೆಯಲು 12 ಕಿಲೋ ಮೀಟರ್ ನಡೆಯಬೇಕಿದೆ ಎಂಬುದು ಗ್ರಾಮಸ್ಥರ ಅಳಲಾಗಿದೆ.
ಇದನ್ನೂ ಓದಿ:"ನನ್ನ ಕಣ್ಣುಗಳನ್ನು ದಾನ ಮಾಡಿ"... ಡೆತ್ನೋಟ್ ಬರೆದಿಟ್ಟು ಬಿಜೆಪಿ ಸದಸ್ಯೆ ಆತ್ಮಹತ್ಯೆಗೆ ಶರಣು
ಒಟ್ಟಾರೆ, ಬಿಂದು ಎಂಬ ಯುವತಿ ಪ್ರಧಾನಿ ಹಾಗೂ ಸಿಎಂಗೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ನಡುವೆ ಸಿಎಂ ಕೂಡ ಅವರ ಪತ್ರಕ್ಕೆ ಸ್ಪಂದಿಸಿದ್ದು, ರಸ್ತೆ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಯುವತಿ ಬಿಂದು ಮಾತ್ರ ನಮ್ಮ ಗ್ರಾಮಕ್ಕೆ ರಸ್ತೆ ಆಗುವವರೆಗೂ ಮದುವೆ ಆಗುವುದಿಲ್ಲ ಎನ್ನುವ ಸಂಕಲ್ಪ ಮಾಡಿದ್ದಾರೆ. ಸ್ವಾಂತತ್ರ್ಯ ಬಂದು 7 ದಶಕಗಳಾದರೂ ಸರಿಯಾದ ರಸ್ತೆ ಇಲ್ಲ, ಬಸ್ ಸಂಪರ್ಕ ಇಲ್ಲ ಎನ್ನುವುದು ಮಾತ್ರ ದುರಂತವೇ ಸರಿ.