ದಾವಣಗೆರೆ: ಒಂದು ಫೋಟೊ ತೆಗೆಯಲು ದಿನಗಟ್ಟಲೇ ಸಮಯ ವ್ಯಯ ಮಾಡಿ ಕಾದು ಕೂರಬೇಕಾಗುತ್ತದೆ. ಅಂಥದರಲ್ಲಿ ನಗರದ ದೃಶ್ಯ ಕಲಾ ಕಾಲೇಜಿನ ವಿದ್ಯಾರ್ಥಿಗಳು ಒಂದೇ ದಿನದಲ್ಲಿ ಸಾವಿರಾರು ಸುಂದರ ಆಕರ್ಷಕ ಫೋಟೊಗಳನ್ನು ತೆಗೆದು ಫೋಟೊ ಪ್ರಿಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ದೃಶ್ಯ ಕಲಾ ಕಾಲೇಜಿನ 21 ವಿದ್ಯಾರ್ಥಿಗಳು ಫೋಟೋಗ್ರಫಿಯಲ್ಲಿ ತಮ್ಮ ಕೈ ಚಳಕವನ್ನು ತೋರಿದ್ದಾರೆ. ನಗರದ ಐತಿಹಾಸಿಕ ಸಂತೇಬೆನ್ನೂರಿನ ಪುಷ್ಕರಣಿ, ಶಾಂತಿ ಸಾಗರ ಸೇರಿದಂತೆ ಚಿತ್ರದುರ್ಗದ ಐತಿಹಾಸಿಕ ಏಳುಸುತ್ತಿನ ಕೋಟೆಯ ಸೂರ್ಯೋದಯ ಹಾಗೂ ಸೂರ್ಯಾಸ್ತದ ಅದ್ಭುತ ದೃಶ್ಯಗಳು ವಿದ್ಯಾರ್ಥಿಗಳ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ವಿದ್ಯಾರ್ಥಿಗಳು ತೆಗೆದ ಫೋಟೋಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಸಾಕಷ್ಟು ಜನರು ಭೇಟಿ ನೀಡಿ ಛಾಯಾಚಿತ್ರಗಳನ್ನು ಕಣ್ತುಂಬಿಕೊಂಡರು. ಸೂರ್ಯೋದಯ ಹಾಗೂ ಸೂರ್ಯಾಸ್ತದ ವೇಳೆಯಲ್ಲಿ ಒಟ್ಟು ಎರಡು ಸಾವಿರ ಫೋಟೋಗಳನ್ನು ತೆಗೆದಿದ್ದು, ಅದರಲ್ಲಿ ಅಳೆದು ತೂಗಿ 70 ಪೋಟೊಗಳನ್ನು ಮಾತ್ರ ಇಂದು ಪ್ರದರ್ಶನಕ್ಕಿಡಲಾಗಿತ್ತು.