ಕರ್ನಾಟಕ

karnataka

ETV Bharat / city

ರಾಜ್ಯಕ್ಕೆ ಮಾದರಿಯಾದ ದಾವಣಗೆರೆ ಜಿಲ್ಲೆಯ ಕೈದಾಳೆ ಗ್ರಾಮ ಪಂಚಾಯಿತಿ - Davangere news

ದಾವಣಗೆರೆ ತಾಲೂಕಿನ ಕೈದಾಳೆ ಗ್ರಾಮ ಪಂಚಾಯಿತಿಗೆ ಕಳೆದ ಆರು ವರ್ಷಗಳ ಹಿಂದೆ ಪಿಡಿಒ ಆಗಿ ಬಂದ ವಿದ್ಯಾವತಿ ಅವರು, ವಿವಿಧ ಅಭಿವೃದ್ದಿ ಕಾರ್ಯಕ್ರಮಗಳನ್ನು ಕೈಗೊಂಡು ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ಮಾಡಿದ್ದಾರೆ.

kaidale Village Panchayat
ರಾಜ್ಯಕ್ಕೆ ಮಾದರಿಯಾದ ದಾವಣಗೆರೆ ಜಿಲ್ಲೆಯ ಕೈದಾಳೆ ಗ್ರಾಮ ಪಂಚಾಯಿತಿ

By

Published : Aug 27, 2020, 8:26 PM IST

ದಾವಣಗೆರೆ: ತಾಲೂಕಿನ ಕೈದಾಳೆ ಗ್ರಾಮ ಪಂಚಾಯಿತಿ ಎರಡು ಬಾರಿ ರಾಜ್ಯಮಟ್ಟದ 'ಗಾಂಧಿ ಗ್ರಾಮ ಪ್ರಶಸ್ತಿ' ಪಡೆದಿದೆ. ಈ ಗ್ರಾಮ ಪಂಚಾಯಿತಿ ಒಳಗೆ‌ ಕಾಲಿಟ್ಟರೆ ಸಾಕು ಸಸ್ಯಕಾಶಿಯೊಳಗೆ ಕಾಲಿಟ್ಟ ಅನುಭವ ಆಗುತ್ತದೆ. ಸುತ್ತಲೂ ಹಚ್ಚಹಸಿರಿನ ಗಿಡಗಳು ಜನರನ್ನು ಸ್ವಾಗತಿಸುತ್ತವೆ. ಒಳಗೆ ಹೋದರೆ ಪುಸ್ತಕ ಭಂಡಾರವೇ ಇದೆ. ಕೈದಾಳೆ ಗ್ರಾಮ ರಾಜ್ಯಮಟ್ಟದಲ್ಲಿ ಚಿರಪರಿಚಿತವಾಗಲು ಕಾರಣ ಕಳೆದ ಆರು ವರ್ಷಗಳ ಹಿಂದೆ ಇಲ್ಲಿಗೆ ಪಿಡಿಒ ಆಗಿ ಬಂದ ವಿದ್ಯಾವತಿ ಅವರ ಸತತ ಪರಿಶ್ರಮ.

ರಾಜ್ಯಕ್ಕೆ ಮಾದರಿಯಾದ ದಾವಣಗೆರೆ ಜಿಲ್ಲೆಯ ಕೈದಾಳೆ ಗ್ರಾಮ ಪಂಚಾಯಿತಿ

ವಿದ್ಯಾವತಿ ಅವರು ಬರುವ ಮುನ್ನ ಅಷ್ಟೇನೂ ಅಭಿವೃದ್ಧಿ ಕಾಣದ ಕೈದಾಳೆ ಗ್ರಾಮದಲ್ಲಿ ಈಗ ನೆಮ್ಮದಿ ವಾತಾವರಣ ಮೂಡಿದೆ. ಸರ್ಕಾರದಿಂದ ಬರುವ ಪ್ರತಿ ಯೋಜನೆಗಳನ್ನು‌ ಜನರಿಗೆ ತಲುಪಿಸುವ ಕೆಲಸ ಮಾಡಿದ ವಿದ್ಯಾವತಿ, ಗ್ರಾಮದ ಸ್ವಚ್ಛತೆ, ರಸ್ತೆ, ವಿದ್ಯುತ್ ಸಂಪರ್ಕ, ಬೀದಿದೀಪ ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಇದೆಲ್ಲದರ ಪರಿಣಾಮ ಈ ಪಂಚಾಯಿತಿ ಎಲ್ಲರ ಗಮನ ಸೆಳೆಯಲು‌ ಕಾರಣವಾಗಿದೆ.

ಸ್ವಚ್ಛ ಭಾರತ ಯೋಜನೆಯಡಿ ಪ್ರತಿ ಮನೆಗೂ ಶೌಚಾಲಯ ಕಟ್ಟಿಸಿಕೊಡುವ ಮೂಲಕ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಎಂಬ ಹೆಗ್ಗಳಿಕೆಗೆ ಪಂಚಾಯಿತಿ ಪಾತ್ರವಾಗಿದೆ. ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಪ್ಪಿಸು ಸಲುವಾಗಿ ಘನ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಿ, ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸಿ ಅದನ್ನು ಸಾವಯವ ಗೊಬ್ಬರವಾಗಿ ಮಾರ್ಪಡಿಸಿ ಜನರಿಗೆ ನೀಡಲಾಗುತ್ತಿದೆ.

ಗ್ರಾಮ ಪಂಚಾಯಿತಿಯಲ್ಲಿ ಸೋಲಾರ್ ವಿದ್ಯುತ್‌ ಬಳಸಲಾಗುತ್ತಿದ್ದು, ಇದರಿಂದ ವರ್ಷಕ್ಕೆ ಪಂಚಾಯಿತಿಗೆ 15 ಸಾವಿರ ರೂಪಾಯಿ ಉಳಿತಾಯ ಆಗುತ್ತಿದೆ. ಜೊತೆಗೆ 30 ಸಾವಿರ ರೂಪಾಯಿ ಆದಾಯವೂ ಬರುತ್ತಿದೆ. ಗ್ರಾಮದ ಬೀದಿ ದೀಪಗಳಿಗೆ ಟೈಮರ್ ಫಿಕ್ಸ್ ಮಾಡಲಾಗಿದ್ದು, ಸಂಜೆ ಆರು ಗಂಟೆಗೆ ಬೀದಿ ದೀಪಗಳು ಹೊತ್ತಿಕೊಂಡು ಬೆಳಿಗ್ಗೆ 6 ಗಂಟೆಗೆ ಆಫ್ ಆಗುತ್ತವೆ. ಅನವಶ್ಯಕವಾಗಿ ದೀಪ ಉರಿಯುವುದನ್ನು ತಪ್ಪಿಸಲಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ‌ ಎರಡು ಬಾರಿ 'ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ' ಹಾಗೂ ಜಿಲ್ಲೆಯಲ್ಲಿ 'ಅತ್ಯುತ್ತಮ‌ ಗ್ರಾಮ ಪಂಚಾಯಿತಿ' ಎಂಬ ಶ್ರೇಯವೂ ಲಭಿಸಿದೆ.

ಗ್ರಾಮ ಪಂಚಾಯಿತಿಯು ಇಷ್ಟೊಂದು ಹೆಸರ ಮಾಡಲು ಗ್ರಾಮದ ಜನರು, ಅಧ್ಯಕ್ಷರು, ಸದಸ್ಯರು, ಕಚೇರಿಯಲ್ಲಿ‌ ಕೆಲಸ ಮಾಡುವ ಸಿಬ್ಬಂದಿ ಪ್ರೋತ್ಸಾಹವೇ ಕಾರಣ. ಮುಂಬರುವ ದಿನಗಳಲ್ಲಿ ಬಡ‌ಮಕ್ಕಳಿಗೆ ಇಲ್ಲಿಯೇ ಉಚಿತವಾಗಿ ಆನ್​ಲೈನಲ್ಲಿ ಎಲ್ಲಾ ಮಾಹಿತಿ ಸಿಗುವಂಥ ಕೆಲಸ ಮಾಡಬೇಕು ಎಂಬ ಉದ್ದೇಶ ಹೊಂದಿದ್ದೇನೆ ಎನ್ನುತ್ತಾರೆ ಪಿಡಿಒ ವಿದ್ಯಾವತಿ.

ಪುಸ್ತಕಗಳ ಭಂಡಾರದೊಳಗೇನಿದೆ:

ಕೈದಾಳೆ ಗ್ರಾಮ ಪಂಚಾಯಿತಿ‌ ಮೇಲಿನ ಕೊಠಡಿಯಲ್ಲಿ ಗ್ರಂಥಾಲಯ ತೆರೆಯಲಾಗಿದೆ. ಇಲ್ಲಿ ಸಾವಿರಕ್ಕೂ ಹೆಚ್ಚಿನ ಪುಸ್ತಕಗಳು ಕಾಣ ಸಿಗುತ್ತವೆ. ಸಾಹಿತ್ಯ, ಸಂಸ್ಕೃತಿ, ಜಾನಪದ, ಖ್ಯಾತ ಲೇಖಕರ ಗ್ರಂಥಗಳು, ಸ್ಪರ್ಧಾತ್ಮಕ‌ ಪರೀಕ್ಷೆಯ ಪುಸ್ತಕಗಳು ಸೇರಿದಂತೆ ಹಲವು ಪುಸ್ತಕಗಳಿದ್ದು, ವಿದ್ಯಾರ್ಥಿಗಳಿಗೆ, ಸಾಹಿತ್ಯಾಸಕ್ತರಿಗೆ ಒಂದೆಡೆ ಸಿಗುವ ಅವಕಾಶ ಕಲ್ಪಿಸಿಕೊಡಲಾಗಿದೆ. ಇದು ಸ್ಥಳೀಯರು ಹಾಗೂ ವಿದ್ಯಾರ್ಥಿಗಳಿಗೆ ಖುಷಿ ಕೊಟ್ಟಿದೆ. ಒಳ್ಳೆಯ ಪರಿಸರವಿದ್ದು, ಅಭ್ಯಾಸ ಮಾಡಲು ಹೇಳಿ‌ಮಾಡಿಸಿದ ತಾಣದಂತಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ABOUT THE AUTHOR

...view details