ಕರ್ನಾಟಕ

karnataka

ETV Bharat / city

ದಾವಣಗೆರೆ: ಕುಸಿಯುತ್ತಿದೆ ಹದಡಿ ಕೆರೆ ಏರಿ, ರೈತರಲ್ಲಿ ಆತಂಕ

ದಾವಣಗೆರೆ ಜಿಲ್ಲೆಯ ಹದಡಿ ಕೆರೆ ಏರಿ ಕುಸಿತವಾಗಿದ್ದು ಸುತ್ತಮುತ್ತಲಿನ ರೈತರಲ್ಲಿ ಆತಂಕ ಮನೆ ಮಾಡಿದೆ. 1983ರಲ್ಲಿ ಕೆರೆಕಟ್ಟೆ ಒಡೆದು ಆಪಾರ ಹಾನಿ ಸಂಭವಿಸಿದ್ದು, ಮರುಕಳಿಸಿದಲ್ಲಿ 1,500 ಎಕರೆ ಜಮೀನು ಜಲಾವೃತವಾಗಲಿದೆ.

davanagere-hadadi-lake
ಹದಡಿ ಕೆರೆ ಕುಸಿತ

By

Published : Aug 5, 2022, 10:04 PM IST

ದಾವಣಗೆರೆ :ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಕೆರೆ ಕಟ್ಟೆಗಳು ತುಂಬಿವೆ. ದಾವಣಗೆರೆ ತಾಲೂಕಿನ ಕೂಗಳತೆಯಲ್ಲಿರುವ ದಶಕ ಪೂರೈಸಿರುವ ಹದಡಿ ಕೆರೆ ಏರಿ ಬಿರುಕು ಬಿಟ್ಟು ಕುಸಿದಿದ್ದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಬೆಣ್ಣೆ ನಗರಿಯನ್ನು ಮಲೆನಾಡಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ಕೆರೆಯ ಏರಿ ಮೇಲೆ ಹಾದು ಹೋಗಿದ್ದು, ಪ್ರಯಾಣಿಕರು ಪ್ರಾಣಾಪಾಯದಲ್ಲಿ ಸಂಚರಿಸುತ್ತಿದ್ದಾರೆ.

1,500 ಎಕರೆ ಜಮೀನು ಈ ಕೆರೆ ನೀರಿನ ಆಶ್ರಯದಲ್ಲಿದೆ. ಭತ್ತ, ಕಬ್ಬು, ಮೆಕ್ಕೆಜೋಳ ಹೀಗೆ ವಿವಿಧ ಬೆಳೆಗಳನ್ನು ಬೆಳೆಯುವ ರೈತರು ಕೆರೆ ಕಟ್ಟೆ ಒಡೆದರೆ ಮುಂದಿನ ಗತಿ ಏನು ಎಂಬ ಚಿಂತೆಯಲ್ಲಿದ್ದಾರೆ. ಈ ಏರಿ ಇದಕ್ಕೂ ಮುಂಚೆ ಕುಸಿತ ಕಂಡಿದ್ದು ಕಳಪೆ ಕಾಮಗಾರಿಯಿಂದ ಮತ್ತದೇ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಕುಸಿಯುತ್ತಿರುವ ಕೆರೆ ಏರಿ ರೈತರಲ್ಲಿ ಮನೆ ಮಾಡಿದ ಆತಂಕ

1983 ರಲ್ಲಿ ಕೆರೆಯಲ್ಲಿ ನೀರು ಭರ್ತಿಯಾಗಿ ಏರಿ ಕುಸಿತ ಕಂಡು ಅಪಾರ ಪ್ರಮಾಣದ ನೀರು ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯಾಗಿತ್ತು. 1983 ರಲ್ಲಿ ನಡೆದ ದುರಂತ ಮರುಳಿಸಿದರೆ 1,500 ಕ್ಕೂ ಹೆಚ್ಚು ಎಕರೆ ಬೆಳೆ ನೀರಿನಲ್ಲಿ ಕೊಚ್ಚಿ ಹೋಗುವ ಸಾಧ್ಯತೆ ದಟ್ಟವಾಗಿದೆ.

ಹದಡಿ ಕೆರೆ ಏರಿ ಮೇಲೆಯೇ ರಾಜ್ಯ ಹೆದ್ದಾರಿ ಹಾದು ಹೋಗಿರುವ ಕಾರಣ ಭಾರಿ ವಾಹನಗಳೂ ಸಂಚರಿಸುತ್ತಿವೆ. ಈ ಭಾರಿ ಗಾತ್ರದ ವಾಹನ ಸಂಚಾರವೇ ಕುಸಿತಕ್ಕೆ ಕಾರಣವೇ ಎಂಬ ಪ್ರಶ್ನೆಯೂ ಮೂಡಿದೆ. ಈ ಹಿಂದೆ ಮೂರ್ನಾಲ್ಕು ಬಾರಿ ಕುಸಿತವಾದಾಗಲೂ ಅಧಿಕಾರಿಗಳು ಬಂದು ಮಣ್ಣು ಹಾಕಿ ಹೋಗಿದ್ದಾರೆಯೇ ವಿನಹ: ಸೂಕ್ತ ಕ್ರಮ ಕೈಗೊಂಡಿಲ್ಲ. ಮತ್ತೆ ಏರಿ ಕುಸಿದಿದ್ದು ಕೆರೆಯ ಸಮೀಪದಲ್ಲಿರುವ ವಸತಿ ನಿಲಯಗಳು ಮತ್ತು ಜಮೀನಿಗೆ ನೀರು ನುಗ್ಗುವ ಭೀತಿಯಿದೆ.

ಇದನ್ನೂ ಓದಿ :ವಿಜಯನಗರ: ಸುರಂಗ ಮಾರ್ಗದಲ್ಲಿ ನೀರು ಸೋರಿಕೆ, ಆತಂಕದಲ್ಲಿ ಜನತೆ

ABOUT THE AUTHOR

...view details