ದಾವಣಗೆರೆ:ಕರಿಮೆಣಸು, ಕಾಫಿಯನ್ನು ಸಾಮಾನ್ಯವಾಗಿ ಮಲೆನಾಡು ಭಾಗದಲ್ಲಿ ಬೆಳೆಯಲಾಗುತ್ತದೆ. ದಾವಣಗೆರೆಯಲ್ಲೊಬ್ಬ ಮಾದರಿ ರೈತ ತನ್ನ ಎರಡು ಎಕರೆ ಜಮೀನಿನಲ್ಲಿ ಕರಿ ಮೆಣಸು, ಕಾಫಿ ಮಾತ್ರವಲ್ಲದೇ ವಿವಿಧ ವಾಣಿಜ್ಯ ಬೆಳೆಗಳನ್ನು ಬೆಳೆದು ಯಶಸ್ವಿಯಾಗಿದ್ದು, ಕೈ ತುಂಬಾ ಆದಾಯ ಪಡೆಯುತ್ತಿದ್ದಾರೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದ ಕೂಗಳತೆಯಲ್ಲಿರುವ ಕೌಳಿ ತಾಂಡದ ರೈತ ಮೋತಿ ನಾಯ್ಕ್ ಸಮಗ್ರ ಕೃಷಿ ಮಾಡುವ ಮೂಲಕ ಮನೆ ಮಾತಾಗಿದ್ದಾರೆ. ತೋಟದಲ್ಲೇ ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಇವರು ಎರಡು ಎಕರೆ ಜಮೀನಿನಲ್ಲಿ ಕರಿಮೆಣಸು, ಕಾಫಿ ಮಾತ್ರವಲ್ಲದೆ ವಿವಿಧ ಬೆಳೆಗಳ ಕೃಷಿ ಮಾಡುತ್ತಿದ್ದಾರೆ. ದ್ರಾಕ್ಷಿ, ಶುಂಠಿ, ಪಪ್ಪಾಯ, ಸಪೋಟ, ಹಲಸು, ಬಾಳೆ, ಅರಿಶಿಣ ಹಾಗು ಅಡಿಕೆ ಹಾಕಿದ್ದಾರೆ.
ಇದಲ್ಲದೇ ಕಾಶ್ಮೀರಿ ಸೇಬು, ಮರ ಸೇಬು ಹಾಗೂ ಕಿತ್ತಳೆ ಗಿಡಗಳನ್ನು ನೆಟ್ಟಿದ್ದು ಫಸಲಿಗೆ ಕಾಯುತ್ತಿದ್ದಾರೆ. ಈ ಎಲ್ಲ ಬೆಳೆಗಳನ್ನು ಬೆಳೆಯಲು ಕೇವಲ ಎರಡು ಲಕ್ಷ ರೂಪಾಯಿ ವ್ಯಯಿಸಿರುವ ಮೋತಿ ನಾಯ್ಕ್, ವರ್ಷಕ್ಕೆ ಹದಿನೈದು ಲಕ್ಷ ರೂ.ಗಿಂತ ಹೆಚ್ಚು ಆದಾಯವನ್ನು ಗಳಿಸುತ್ತಿದ್ದಾರೆ.
ಅಡಿಕೆ ಗಿಡಗಳನ್ನು ಮಾರಾಟ ಮಾಡುವ ಇವರ ಬಳಿಯಿಂದ ಚಿಂತಾಮಣಿಯಿಂದ ರೈತರು ಆಗಮಿಸಿ ಹದಿನೈದು ಸಾವಿರ ಗಿಡಗಳನ್ನು ಖರೀದಿಸಿದ್ದಾರೆ. ರೈತರು ವಿವಿಧೆಡೆಯಿಂದ ಬಂದು ಬೆಳೆಗಳ ಬಗ್ಗೆ ಮಾಹಿತಿ ಪಡೆಯುತ್ತಿರುತ್ತಾರೆ. ಶಿವಮೊಗ್ಗದ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕೂಡ ತೋಟಕ್ಕೆ ಆಗಮಿಸಿ ಅಧ್ಯಯನ ಮಾಡುತ್ತಾರೆ ಎನ್ನುತ್ತಾರೆ ರೈತ ಮೋತಿ ನಾಯ್ಕ್.