ಕರ್ನಾಟಕ

karnataka

ETV Bharat / city

ಬೆಣ್ಣೆನಗರಿ ಮಂದಿ ಮನ ಕದಿಯಲು ಬಿಜೆಪಿ, ಕಾಂಗ್ರೆಸ್ ಬಿರುಸಿನ ಪ್ರಚಾರ, ಪಕ್ಷೇತರರ ಸವಾಲು! - ದಾವಣಗೆರೆಯಲ್ಲಿ ಜೆಡಿಎಸ್​​, ಬಿಜೆಪಿ, ಕಾಂಗ್ರೆಸ್ ಬಿರುಸಿನ ಪ್ರಚಾರ

ದಾವಣಗೆರೆ ಮಹಾನಗರ ಪಾಲಿಕೆಯ ಚುನಾವಣಾ ಪ್ರಚಾರ ರಂಗೇರಿದ್ದು, ಕಮಲ ಅಭ್ಯರ್ಥಿಗಳ ಪರ ಘಟಾನುಘಟಿ ನಾಯಕರು ಪ್ರಚಾರಕ್ಕೆ ಇಳಿದರೆ, ಕಾಂಗ್ರೆಸ್ ಹುರಿಯಾಳುಗಳ ಪರ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.

ಪ್ರಚಾರ

By

Published : Nov 8, 2019, 11:59 PM IST

ದಾವಣಗೆರೆ:ಮಹಾನಗರ ಪಾಲಿಕೆಯ ಚುನಾವಣೆಗೆ ಇನ್ನುಳಿದಿರುವುದು ಕೆಲವೇ ಕೆಲ ದಿನಗಳು ಮಾತ್ರ. ಕಾಂಗ್ರೆಸ್, ಬಿಜೆಪಿ ಪ್ರಚಾರ ಜೋರಾಗಿದೆ. ಕಮಲ ಅಭ್ಯರ್ಥಿಗಳ ಪರ ಘಟಾನುಘಟಿ ನಾಯಕರು ಪ್ರಚಾರಕ್ಕೆ ಇಳಿದರೆ, ಕಾಂಗ್ರೆಸ್ ಹುರಿಯಾಳುಗಳ ಪರ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.

45 ವಾರ್ಡ್​ಗಳ ಪೈಕಿ ಕಾಂಗ್ರೆಸ್ 44 ಸ್ಥಾನಗಳಲ್ಲಿ ಸ್ಪರ್ಧೆಗಿಳಿದಿದ್ದರೆ, ಬಿಜೆಪಿ ಎಲ್ಲಾ ವಾರ್ಡ್​ಗಳಲ್ಲಿಯೂ ಕಣಕ್ಕಿಳಿದಿದೆ. ಇನ್ನು ಜೆಡಿಎಸ್, ಪಕ್ಷೇತರ ಅಭ್ಯರ್ಥಿಗಳು ಪ್ರಚಾರದಿಂದ ದೂರ ಉಳಿದಿಲ್ಲ. ಆಯಾ ಕ್ಷೇತ್ರಗಳಲ್ಲಿ ಮತದಾರರ ಮನಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಸಂಸದ ಜಿ. ಎಂ. ಸಿದ್ದೇಶ್ವರ್, ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಕಮಲ ಹುರಿಯಾಳುಗಳ ಪರ ಮನೆ ಮನೆಗೆ ತೆರಳಿ ಮತಯಾಚಿಸಿದರೆ, ರೋಡ್ ಶೋ ಮಾಡುವ ಮೂಲಕ ಶಾಮನೂರು ಶಿವಶಂಕರಪ್ಪ ಕೈ ಉಮೇದುವಾರರ ಪರ ಬಿರುಸಿನ ಪ್ರಚಾರ ನಡೆಸಿದರು.

ಬೆಣ್ಣೆನಗರಿ ಮಂದಿ ಮನ ಕದಿಯಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್​ ಬಿರುಸಿನ ಪ್ರಚಾರ

ಗಾಂಧಿನಗರದಲ್ಲಿ ಜಿ. ಡಿ. ಪ್ರಕಾಶ್ ಪರ ಶಾಮನೂರು ಶಿವಶಂಕರಪ್ಪ ರೋಡ್ ಶೋ ನಡೆಸಸಿ ಮತದಾರರ ಸೆಳೆಯುವ ಪ್ರಯತ್ನ ಮಾಡಿದರು. ಬೇರೆ ಬೇರೆ ಪಕ್ಷಗಳಿಂದ ಬಿಜೆಪಿಗೆ ಮುಖಂಡರನ್ನು ಬರ ಮಾಡಿಕೊಂಡ ಬಳಿಕ ಮಾತನಾಡಿದ ಸಂಸದ ಜಿ. ಎಂ. ಸಿದ್ದೇಶ್ವರ್, ನವೆಂಬರ್ 12 ರಂದು ಬಿಜೆಪಿಗೆ ಮತ ಹಾಕುವಂತೆ ಜನರನ್ನು ಸೆಳೆಯಿರಿ ಎಂದು ಕರೆ ನೀಡಿದರೆ, ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ, ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತದಿಂದ ದಾವಣಗೆರೆ ಜನರು ಬೇಸತ್ತಿದ್ದಾರೆ. ಹಾಗಾಗಿ, ಈ ಬಾರಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

25 ನೇ ವಾರ್ಡ್​ನಿಂದ ಪತ್ರಕರ್ತ ಕಣಕ್ಕೆ...!

ಇನ್ನು ಪಾಲಿಕೆಯ ಕೆ.ಬಿ. ಬಡಾವಣೆ, ಡಿಸಿಎಂ ಕ್ವಾರ್ಟರ್ಸ್ 25 ನೇ ವಾರ್ಡ್​ನಿಂದ ಪತ್ರಕರ್ತ ರಾಜಶೇಖರ್ ಅಲಿಯಾಸ್ ಹೆಚ್. ಎಂ. ರಾಜೇಶ್, ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇಲ್ಲಿ ಬಿಜೆಪಿಯಿಂದ ಎಸ್.ಟಿ. ವೀರೇಶ್, ಕಾಂಗ್ರೆಸ್ ನಿಂದ ಕೆ.ಜಿ. ಶಿವಕುಮಾರ್, ಪಕ್ಷೇತರರಾಗಿ ಕುಬೇರ ಎಂಬುವವರು ಸ್ಪರ್ಧಿಸಿದ್ದಾರೆ. ಇಲ್ಲಿ ಸ್ಪರ್ಧಿಸಿರುವ ನಾಲ್ವರು ಲಿಂಗಾಯತ ಸಮುದಾಯದವರು ಎಂಬುದು ವಿಶೇಷ. ಇನ್ನು ಕಾಂಗ್ರೆಸ್, ಬಿಜೆಪಿಯಂತ ಬಲಾಢ್ಯ ಪಕ್ಷಗಳ ಎದುರು ತೆನೆ ಹೊತ್ತ ಮಹಿಳೆ ಗುರುತಿನಿಂದ ಕಣಕ್ಕಿಳಿದಿರುವ ರಾಜೇಶ್ ಇದೇ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ವಾರ್ಡ್ ನಲ್ಲಿ ನಾಲ್ವರು ಮಾತ್ರ ಕಣಕ್ಕಿಳಿದಿದ್ದಾರೆ. ಬೇರೆ ಯಾರೂ ನಾಮಪತ್ರ ಸಲ್ಲಿಸಿಲ್ಲ ಎಂಬುದು ವಿಶೇಷ.

ಒಂದೆಡೆ ಸಂಸದ ಸಿದ್ದೇಶ್ವರ್, ರೇಣುಕಾಚಾರ್ಯ ಸೇರಿದಂತೆ ಬಿಜೆಪಿ ನಾಯಕರು ಈ ಬಾರಿ ಪಾಲಿಕೆಯಲ್ಲಿ ಕಮಲ ಅರಳುತ್ತದೆ ಎಂದು ಹೇಳುತ್ತಿದ್ದರೆ, ಇತ್ತ ಶಾಮನೂರು ಶಿವಶಂಕರಪ್ಪ 40 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅಧಿಕಾರ ಹಿಡಿಯುತ್ತೇವೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಬೆಣ್ಣೆನಗರಿ ಮಂದಿ ಮನಸ್ಸಲ್ಲಿ ಏನಿದೆ ಎಂಬುದು ನವೆಂಬರ್ 14 ರಂದು ಗೊತ್ತಾಗಲಿದೆ.

ABOUT THE AUTHOR

...view details