ದಾವಣಗೆರೆ: ಈಗಾಗಲೇ ಪ್ರಕೃತಿ ವಿಕೋಪಕ್ಕೆ ರೈತ ತತ್ತರಿಸಿದ್ದಾನೆ. ಇದರ ಜೊತೆಗೆ ನೂರಾರು ಎಕರೆ ಅಡಿಕೆ, ಬಾಳೆ, ತೆಂಗಿನ ತೋಟಗಳು ನೆಲಕಚ್ಚುವ ಹಂತಕ್ಕೆ ತಲುಪಿದ್ದು, ಅನ್ನದಾತರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಇದಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿ ಕಾರಣ ಎಂಬ ಆರೋಪಗಳು ಕೇಳಿಬಂದಿವೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ದಾಗಿನಕಟ್ಟೆ ಗ್ರಾಮದ ಕೂಗಳತೆಯಲ್ಲಿರುವ ನಾಗತಿಕೆರೆ ನೀರು ಸಾಕಷ್ಟು ಅವಾಂತರ ಸೃಷ್ಟಿಸಿದೆ. ನೀರಾವರಿ ಇಲಾಖೆಯ ಅಧಿಕಾರಿಗಳು ಕೆರೆ ಕೋಡಿಯನ್ನು ಎರಡು ಅಡಿ ಎತ್ತರ ಮಾಡಿದ ಬೆನ್ನಲ್ಲೇ ಕೆರೆಯ ಹಿನ್ನೀರಿನಲ್ಲಿರುವ ನೂರಾರು ಎಕರೆ ಅಡಿಕೆ, ಬಾಳೆ, ತೆಂಗಿನ ತೋಟಗಳು ಜಲಾವೃತವಾಗಿವೆ. ಸತತ ಒಂದೂವರೆ ತಿಂಗಳಿನಿಂದ ತೋಟಗಳಲ್ಲಿ ನೀರು ನಿಂತಿರುವ ಪರಿಣಾಮ ರೈತರು ಸದಾ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಅದರಲ್ಲೂ ಅಡಿಕೆ ತೋಟಗಳಲ್ಲಿ ಎರಡು ತಿಂಗಳುಗಳಿಂದ ಮೂರ್ನಾಲ್ಕು ಅಡಿ ನೀರು ನಿಂತಿದ್ದು, ಮರಗಳು ಕೊಳೆಯುವ ಸ್ಥಿತಿಗೆ ತಲುಪಿವೆ.