ದಾವಣಗೆರೆ: ಕೊರೊನಾ ಅಟ್ಟಹಾಸಕ್ಕೆ ಸಿಲುಕಿ ಮಕ್ಕಳ ಭವಿಷ್ಯವೂ ಕಮರುತ್ತಿದೆ. ಬಹುತೇಕ ಗ್ರಾಮೀಣ ಭಾಗದ ಶಾಲಾ ಮಕ್ಕಳು ಕೃಷಿ ಕೆಲಸದಲ್ಲಿ ನಿರತರಾಗಿದ್ದಾರೆ. ಶಾಲೆಗಳು ಬಂದ್ ಆಗಿರುವ ಜೊತೆಗೆ ವಿದ್ಯಾಗಮ ಯೋಜನೆ ಕೂಡ ನಿಂತಿದ್ದು ಮಕ್ಕಳು ಅನಿವಾರ್ಯವಾಗಿ ಕೂಲಿ ಕೆಲಸದಲ್ಲಿ ತೊಡಗಿದ್ದಾರೆ.
ದಾವಣಗೆರೆ ತಾಲೂಕಿನ ಬೇತೂರು ಗ್ರಾಮ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಶೇ. 70ರಷ್ಟು ಶಾಲಾ-ಕಾಲೇಜು ವಿದ್ಯಾರ್ಥಿಗಳು ಕೂಲಿ ಕೆಲಸಕ್ಕೆ ತೆರಳಿ ಹಣ ಸಂಪಾದಿಸುವ ಮೂಲಕ ತಮ್ಮ ಪೋಷಕರಿಗೆ ನೆರವಾಗುತ್ತಿದ್ದಾರೆ. ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಕೂಲಿ ಕೆಲಸಕ್ಕೆ ಹೋದರೆ ಮನೆಯ ಆರ್ಥಿಕ ಪರಿಸ್ಥಿತಿ ಕೊಂಚ ಸುಧಾರಿಸಬಹುದು ಎಂಬ ಕಾರಣಕ್ಕೆ ಕೆಲಸಕ್ಕೆ ಹೋಗುತ್ತಿದ್ದೇವೆ. ತರಗತಿಗಳು ಪ್ರಾರಂಭವಾದ ಬಳಿಕ ಮತ್ತೆ ಶಾಲೆಗಳಿಗೆ ಮರಳುತ್ತೇವೆ ಎನ್ನುತ್ತಾರೆ ವಿದ್ಯಾರ್ಥಿಗಳು.