ದಾವಣಗೆರೆ: ರಮೇಶ ಜಾರಕಿಹೊಳಿ ವಿಚಾರದಲ್ಲಿ ಸರಿ ತಪ್ಪು ಏನು ಎಂಬುದನ್ನು ಕೋರ್ಟ್ ಹೇಳುತ್ತದೆ. ಆದ್ರೆ ಅಷ್ಟರಲ್ಲಿ ಅವರ ತೇಜೋವಧೆ ಆಗಿ ಹೋಗಿರುತ್ತದೆ. ಈ ಕಾರಣಕ್ಕಾಗಿಯೇ ಕೆಲ ಸಚಿವರು ಕೋರ್ಟ್ ಮೊರೆ ಹೋಗಿ ಮಾಧ್ಯಮಗಳಲ್ಲಿ ಪ್ರಸಾರ ಆಗದಂತೆ ತಡೆ ತರುತ್ತಿದ್ದಾರೆ ಎಂದು ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದರು.
ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಪಂಚಮಸಾಲಿ ಗುರುಪೀಠಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಜಾರಕಿಹೊಳಿ ಅವರ ವಿಚಾರದಲ್ಲಿ ಯುವತಿ ಬಂದು ದೂರು ನೀಡಿಲ್ಲ ಎಂಬ ವಿಚಾರ ಚರ್ಚೆ ಆಗುತ್ತಿದೆ. ಈ ಪ್ರಕರಣವನ್ನ ಬಳಕೆ ಮಾಡಿಕೊಂಡು ಮೂರನೇ ವ್ಯಕ್ತಿಗಳು ದೂರು ನೀಡುತ್ತಿದ್ದು, ಕೇಸ್ಗೆ ಸಂಬಂಧಿಸಿವರು ಮಾತ್ರ ದೂರು ನೀಡಬೇಕು. ಇಂತಹ ವಿಚಾರಕ್ಕೆ ಸಂಬಂಧಿಸಿ 25ಕ್ಕೂ ಹೆಚ್ಚು ಸಚಿವರು ಕೋರ್ಟ್ ಮೊರೆ ಹೋಗುತ್ತಿದ್ದಾರೆ ಎಂಬ ವಿಚಾರ ನನಗೆ ಗೊತ್ತಿಲ್ಲ ಎಂದು ಹೇಳಿದರು.