ಹರಿಹರ: ಕೊರೊನಾ ವೈರಸ್‌ಗೂ, ಹಕ್ಕಿಜ್ವರಕ್ಕೂ ಯಾವುದೇ ಸಂಬಂಧವಿಲ್ಲ. ಯಾರೂ ಭಯಪಡುವುದು ಬೇಡ ಎಂದು ಶಾಸಕ ಎಸ್.ರಾಮಪ್ಪ ಅವರು ಬನ್ನಿಕೋಡು ಗ್ರಾಮಸ್ಥರಿಗೆ ಧೈರ್ಯ ತುಂಬಿದರು.
ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಹಕ್ಕಿಜ್ವರ ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಮದ ಬೀರೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ಜನ ಜಾಗೃತಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಶಾಸಕರು ಮಾತನಾಡಿ, ಹಕ್ಕಿಜ್ವರಕ್ಕೂ ಮತ್ತು ಕೊರೊನಾ ವೈರಸ್‌ಗೂ ಯಾವುದೇ ಸಂಬಂಧವಿಲ್ಲ. ವದಂತಿಗೆ ಕಿವಿಗೊಡಬಾರದು. ತಾಲೂಕು ಮಟ್ಟದ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದರು.
ಕೊರೊನಾ ವೈರಸ್ನಿಂದ ವಿಶ್ವವೇ ತಲ್ಲಣಗೊಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿವೆ. ದೇಶಿಯ ಆಹಾರ ಪದ್ಧತಿಯಿಂದ ಯಾವುದೇ ಸೋಂಕು ಬೇಗನೆ ಹರಡುವುದಿಲ್ಲ. ಕಾರಣ ನಮ್ಮಲ್ಲಿರುವ ಬೇಯಿಸಿ ತಿನ್ನುವ ಆಹಾರ ಪದ್ದತಿಯಿಂದ ವೈರಸ್ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ಸರ್ಕಾರ ಮತ್ತು ಅಧಿಕಾರಿಗಳು ಕೊಟ್ಟ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಎಂದು ಕಿವಿಮಾತು ಹೇಳಿದರು.