ದಾವಣಗೆರೆ: ಏನ್ರಪ್ಪಾ ನಾನು ಕರೆಕ್ಟ್ ಟೈಮ್ಗೆ ಬಂದೆ ಅಲ್ವಾ? ಎಂದು ಸಿಎಂ ಯಡಿಯೂರಪ್ಪ ಅವರು ಸ್ಥಳದಲ್ಲಿದ್ದ ಪ್ರಭು ಚೌವ್ಹಾಣ್ ಹಾಗೂ ಪುತ್ರ ರಾಘವೇಂದ್ರರಿಗೆ ಕೇಳಿದ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದ ಹೆಲಿಪ್ಯಾಡ್ನಲ್ಲಿ ನಡೆಯಿತು.
ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪಕ್ಕೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ ಸೂರಗೊಂಡನಕೊಪ್ಪದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮಕ್ಕೆ ನಿಗಿದಿಯಾಗಿದ್ದ ಸಮಯಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದರು. ಅಲ್ಲಿಂದ ಕಾರಿನಿಂದ ಹೊರಟ ಸಿಎಂ, ಸಮೀಪದಲ್ಲಿಯೇ ಧ್ವಜ ವಂದನೆ ಸ್ವೀಕರಿಸಲು ಬಂದರು. ಆಗ ಸರಿಯಾದ ವೇಳೆಗೆ ಬಂದೆ ಅಲ್ವಾ ಎಂದು ಪ್ರಭು ಚೌವ್ಹಾಣ್ ಹಾಗೂ ಪುತ್ರ ರಾಘವೇಂದ್ರರಿಗೆ ಕೇಳಿದರು. ಇದಕ್ಕೆ ರಾಘವೇಂದ್ರ ಹೌದು ಎಂದು ಹೇಳಿದರು.
ಧ್ವಜ ವಂದನೆ ಸ್ವೀಕರಿಸಿದ ಯಡಿಯೂರಪ್ಪ, ವೇದಿಕೆಯತ್ತ ಹೊರಡಲು ಮುಂದಾದರು. ಆಗ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಯಡಿಯೂರಪ್ಪ ಅವರಿಗೆ ಕಿವಿಯಲ್ಲಿ ಏನೋ ಹೇಳಿದರು. ಆಗ ಮತ್ತೆ ವಾಪಾಸ್ ಬಂದ ಯಡಿಯೂರಪ್ಪ, ಚನ್ನಗಿರಿ ತಾಲೂಕಿನ ನವಿಲೇಹಾಳ್ ನಿಂದ ಬಂದಿದ್ದ ತಾಲೂಕು ಗ್ರಂಥಾಲಯದ ಮೇಲ್ವಿಚಾರಕ ಆರ್. ಎನ್. ದಾದಾಪೀರ್ ಅವರಿಂದ ಮನವಿ ಸ್ವೀಕರಿಸಿದರು.
ಬಳಿಕ 'ಈ ಟಿವಿ ಭಾರತ' ಜೊತೆ ಮಾತನಾಡಿದ ದಾದಾಪೀರ್, ಸಿಎಂ ಅವರಿಗೆ ನೇರವಾಗಿ ಮನವಿ ಸಲ್ಲಿಸಿದ್ದು ತುಂಬಾ ಖುಷಿ ತಂದಿದೆ. ಜನಸ್ಪಂದನ ಸಭೆಗೆ ಹೋಗಿದ್ದೆ, ಆಗ ಡಿಸಿ ಅವರು ಸಿಎಂ ಅವರಿಗೆ ಮನವಿ ಸಲ್ಲಿಸುವಂತೆ ಹೇಳಿದ್ದರು. ಹಾಗಾಗಿ ಇಲ್ಲಿಗೆ ಬಂದಿದ್ದೇನೆ. ಡಿಸಿ ಅವರಿಂದ ಇದು ಸಾಧ್ಯವಾಯ್ತು. ರಾಜ್ಯ ಬಜೆಟ್ನಲ್ಲಿ ಸರ್ಕಾರಿ ಗ್ರಾಮ ಪಂಚಾಯಿತಿಯ ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ ಜಾರಿ ಮಾಡಬೇಕು. ರಾಜ್ಯದಲ್ಲಿ 6,773 ಮೇಲ್ವಿಚಾರಕರಿದ್ದು, ಇವರ ಕೆಲಸದ ಅವಧಿ ಕಡಿಮೆ ಮಾಡಬೇಕು. ಈ ಬೇಡಿಕೆ ಈಡೇರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿರುವುದಾಗಿ ದಾದಾಪೀರ್ ತಿಳಿಸಿದ್ದಾರೆ.